ಶಿವಮೊಗ್ಗ:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಭಾರಿ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಸುದ್ದಿಗೋಷ್ಟಿ ಭದ್ರಾವತಿಯಲ್ಲಿ ನಡೆದ ಪ್ರೋ ಕಬಡ್ಡಿ ಪಂದ್ಯಾವಳಿ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿದ್ದ ಗಲಾಟೆ ಇದೀಗ ಎರಡು ಪಕ್ಷಗಳ ನಡುವಿನ ಘರ್ಷಣೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ಅವರ ಮಕ್ಕಳು ಮತ್ತು ಬೆಂಬಲಿಗರ ವಿರುದ್ಧ ದೂರು ದಾಖಲಾಗಿದ್ದು, ಈಗಾಗಲೇ ಶಾಸಕರ ಪುತ್ರನ ಬಂಧಿಸಲಾಗಿದೆ. ಇದರಿಂದ ಕೆರಳಿರುವ ಕಾಂಗ್ರೆಸ್ ನಾಯಕರು, ಇದೀಗ ಬಿಜೆಪಿ ಸರ್ಕಾರದ ವಿರುದ್ಧ ಭಾರಿ ಹೋರಾಟಕ್ಕೆ ಸಜ್ಜಾಗಿದ್ದಾರೆ.
ರಾಜ್ಯದ ಬಿಜೆಪಿ ಸರ್ಕಾರ, ವಿಪಕ್ಷ ನಾಯಕರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಬೆದರಿಸುವ ಕೆಲಸ ಮಾಡುತ್ತಿದೆ. ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಭದ್ರಾವತಿ ಹಿರಿಯ ಶಾಸಕ ಸಂಗಮೇಶ್ ಅವರ ಮೇಲೆ ಸೆಕ್ಷನ್ 370 ಅಡಿ ಹಾಗೂ ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ. ಹೀಗಾಗಿ, ಮಾರ್ಚ್ 13ರಂದು ಪ್ರತಿಭಟಿಸಲು ಕಾಂಗ್ರೆಸ್ ಸಿದ್ದವಾಗಿದೆ. ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಶಿವಮೊಗ್ಗದಲ್ಲಿ ಬೀಡುಬಿಟ್ಟಿದ್ದು, ಈ ವಿಚಾರವಾಗಿ ಸುದ್ದಿಗೋಷ್ಠಿ ಕೂಡ ನಡೆಸಿದ್ದಾರೆ.
ಓದಿ:ಸಿಎಂ ಆದವರು ಖಾತೆ ಇಲ್ಲದೆ ಅಭಿವೃದ್ಧಿಗೆ ಕೆಲಸ ಮಾಡಬೇಕು; ಯಡಿಯೂರಪ್ಪಗೆ ಹಳ್ಳಿ ಹಕ್ಕಿ ಟಾಂಗ್
ಈ ಪ್ರತಿಭಟನೆಯ ನೇತೃತ್ವವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಮುನಿಯಪ್ಪ ವಹಿಸಲಿದ್ದು, ಕಾಂಗ್ರೆಸ್ನ ಎಲ್ಲ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಶಿವಮೊಗ್ಗ ಬಸ್ ನಿಲ್ದಾಣದಿಂದ ಸೈನ್ಸ್ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, 25 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆಯಿದೆ.