ಶಿವಮೊಗ್ಗ : ಈ ಬಾರಿಯ ಬಜೆಟ್ನಲ್ಲಿ ಮಹಿಳಾ, ಕೃಷಿ ಹಾಗೂ ನೀರಾವರಿ ಪರ ಬಜೆಟ್ ಮಂಡಿಸಲಾಗುವುದೆಂದು ಸಿಎಂ ಬಿ.ಎಸ್. ಯಡಿಯೂರಪ್ಪನವರು ಬಜೆಟ್ ಗುಟ್ಟು ರಟ್ಟು ಮಾಡಿದರು.
ನಗರದಲ್ಲಿಂದು ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಿದ ನಂತರ ಮಾತನಾಡುವಾಗ, ಮಾ.8ಕ್ಕೆ ಬಜೆಟ್ ಮಂಡನೆ ಮಾಡುತ್ತಿದ್ದೇನೆ. ಹಣಕಾಸಿನ ಇತಿಮಿತಿಯಲ್ಲಿಯೇ, ಈ ಬಾರಿ ಮಹಿಳೆಯರಿಗೆ ಹೆಚ್ಚಿನ ಅನುಕೂಲ, ಕೃಷಿ ಮತ್ತು ನೀರಾವರಿ ಯೋಜನೆಗೆ ಅನುಕೂಲ ಮಾಡಿಕೊಡುವ ಯೋಜನೆ ರೂಪಿಸಲಾಗುವುದಲ್ಲದೇ, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಹೇಳಿದರು.
ಅಲ್ಲದೇ, ಬಹಳ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿ, ಕೋವಿಡ್ ಸಂಕಷ್ಟವನ್ನು ಎದುರಿಸಿದ್ದೇವೆ. ಈ ನಡುವೆಯೂ, ಯಾವುದೇ ಅಭಿವೃದ್ಧಿ ಕುಂಠಿತವಾಗದಂತೆ ನೋಡಿಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದರು.
ರಾಜ್ಯ ಬಜೆಟ್ ಗುಟ್ಟು ರಟ್ಟು ಮಾಡಿದ ಸಿಎಂ ಬಿಎಸ್ವೈ ಕುಮಾರ್ ಬಂಗಾರಪ್ಪ ಅಸಮಾಧಾನ :ಇದಕ್ಕೂ ಮುನ್ನ ಸೊರಬದಲ್ಲಿ ಹೈಡ್ರಾಮವೇ ನಡೆಯಿತು. ಶಾಸಕ ಕುಮಾರ್ ಬಂಗಾರಪ್ಪ, ಸಿಎಂ ಮತ್ತು ಸಂಸದರ ವಿರುದ್ಧ ಮುನಿಸಿಕೊಂಡಿದ್ದರು. ಈ ಕಾರ್ಯಕ್ರಮವನ್ನ ಬಾಯ್ಕಾಟ್ ಮಾಡುತ್ತೇನೆ ಎಂದು ಹೇಳಿ ತಮ್ಮ ನಿವಾಸದಲ್ಲೇ ಉಳಿದಿದ್ದರು. ಈ ವೇಳೆ ಕುಮಾರ್ ನಿವಾಸಕ್ಕೆ ತೆರಳಿದ ಸಂಸದ ರಾಘವೇಂದ್ರ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಕುಮಾರ್ ಬಂಗಾರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಿದರು.
ಯೋಜನೆಯ ಹೆಸರಲ್ಲಿ ನನ್ನ ಹೆಸರಿಲ್ಲ :ಈ ವೇಳೆ ಅಸಮಾಧಾನ ಹೊರಹಾಕಿದ ಕುಮಾರ್ ಬಂಗಾರಪ್ಪನವರು, ನೀರಾವರಿ ಯೋಜನೆ ಸಂಬಂಧ ಮಾಡಲಾಗಿರುವ ಸಾಕ್ಷ್ಯಚಿತ್ರದಲ್ಲಿ ತಮ್ಮ ಉಲ್ಲೇಖ ಎಲ್ಲೂ ಇಲ್ಲ. ವಿಡಿಯೋಗಾಗಿ ನನ್ನ ಅಭಿಪ್ರಾಯ ಕೇಳಲಾಗಿಲ್ಲ. ಅಲ್ಲದೇ, ಇಲಾಖೆ ವತಿಯಿಂದ ಹೊರತರಲಾಗಿರುವ ಬ್ರೋಚರ್ನಲ್ಲೂ ಹೆಸರಾಗಲೀ, ಭಾವಚಿತ್ರವಾಗಲೀ ಇಲ್ಲ ಅಂತಾ ಕಿರಿಕಾರಿದ್ದಾರೆ ಎನ್ನಲಾಗಿದೆ.
ಅಲ್ಲದೇ, ಕಳೆದ ವಾರವಷ್ಟೇ ತಾಲೂಕು ಸಮಿತಿ ರಚನೆ ಸಂಬಂಧ, ಮೂಲ, ವಲಸಿಗ ಎಂಬ ಬಗ್ಗೆ ಅಸಮಾಧಾನದ ಹೊಗೆ ಆಡಿದ್ದು, ಈ ಸಂಬಂಧ ಕಾರ್ಯಕ್ರಮದ ಫ್ಲೆಕ್ಸ್ ಕೂಡ ಹರಿಯಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು. ಬಳಿಕ ಅವರ ಮನವೊಲಿಸಿ ಅವರನ್ನು ಕರೆ ತರಲಾಯಿತಾದರೂ, ಕಾರ್ಯಕ್ರಮದ ವೇದಿಕೆಯಲ್ಲಿ ಕುಮಾರ್ ಬಂಗಾರಪ್ಪ ಅವರ ಬೇಸರ ಎದ್ದು ಕಾಣುತ್ತಿತ್ತು.
ಈ ನಡುವೆಯೂ ಶಾಸಕ ಕುಮಾರ್ ಬಂಗಾರಪ್ಪ ಸೊರಬ ತಾಲೂಕಿನ ಅಭಿವೃದ್ಧಿ ಬಗ್ಗೆ ಸಿಎಂ ಅವರ ಗಮನಕ್ಕೆ ತಂದರು. ಅಷ್ಟೇ ಅಲ್ಲ, ಬಿಜೆಪಿ ಜಿಲ್ಲಾಧ್ಯಕ್ಷರು ಯಾವುದೇ ಗೊಂದಲ, ಅಸಮಾಧಾನ ಇಲ್ಲ ಅಂತಾ ಮಾದ್ಯಮಗಳಿಗೆ ಹೇಳಿ, ತೇಪೆ ಹಚ್ಚುವ ಕೆಲಸಕ್ಕೆ ಮುಂದಾದರು.
ಸಿಎಂ ಯಡಿಯೂರಪ್ಪ ಅವರ ಹುಟ್ಟುಹಬ್ಬ ಹಿನ್ನೆಲೆ ತವರು ಜಿಲ್ಲೆ ಶಿವಮೊಗ್ಗದ ಭೇಟಿಗೆ ಜೋಡಿಸಲಾಗಿದ್ದ ಏತನೀರಾವರಿ ಯೋಜನೆ ಕಾರ್ಯಕ್ರಮ, ಶಾಸಕರ ಅಸಮಾಧಾನಕ್ಕೆ ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.