ಶಿವಮೊಗ್ಗ:ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 8 ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಗುಜರಾತ್ನ ಅಹಮದಾಬಾದ್ಗೆ ಹೋಗಿ ಬಂದ ಒಟ್ಟು 9 ಜನರಲ್ಲಿ 8 ಜನರಿಗೆ ಸೋಂಕು ಇರುವುದು ದೃಢವಾಗಿದೆ.
ಇವರೆಲ್ಲಾ ನಿನ್ನೆ ಬೆಳಗ್ಗೆ ಅಹಮದಾಬಾದ್ನಿಂದ ಬಸ್ನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಇವರನ್ನು ನಿನ್ನೆಯೇ ತಪಾಸಣೆ ನಡೆಸಿ, ಕ್ವಾರಂಟೈನ್ ಮಾಡಲಾಗಿತ್ತು. ಇಂದು ಇವರ ವರದಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಎಲ್ಲರನ್ನು ಸಿಮ್ಸ್ನ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಿನ್ನೆ ರಾತ್ರಿ ತಬ್ಲಿಘಿಗಳನ್ನು ಶಿವಮೊಗ್ಗ ಹೊರವಲಯದ ಮಲ್ಲಿಗೇನಹಳ್ಳಿಯ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಇಂದು ಬೆಳಗ್ಗೆ ಅವರನ್ನು ಆ್ಯಂಬ್ಯುಲೆನ್ಸ್ ಮೂಲಕ ಸಿಮ್ಸ್ ಮೆಗ್ಗಾನ್ ಭೋದನಾಸ್ಪತ್ರೆಗೆ ಕರೆತರಲಾಯಿತು. ಪಾಸಿಟಿವ್ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಗಡಿ ಭಾಗದ ಚೆಕ್ಪೋಸ್ಟ್ನಲ್ಲಿ ತಪಾಸಣೆ ಚುರುಕುಗೊಂಡಿದೆ. ಪ್ರತಿ ವಾಹನ, ಬೈಕ್, ಕಾರು ಸೇರಿದಂತೆ ಎಲ್ಲವನ್ನೂ ತಪಾಸಣೆ ಮಾಡಲಾಗುತ್ತಿದೆ.