ಶಿವಮೊಗ್ಗ:ವೆಲ್ಡಿಂಗ್ ಶಾಪ್ನವರ ಅಜಾಗರೂಕತೆಗೆ 8 ವರ್ಷದ ಬಾಲಕ ಬಲಿಯಾಗಿರುವ ಘಟನೆ ನಗರದ ಹೊಸಮನೆ ಬಡಾವಣೆಯ ಚಾನಲ್ ಏರಿಯಾದಲ್ಲಿ ನಡೆದಿದೆ.
ಕುತ್ತಿಗೆ ಮೇಲೆ ರಾಡ್ ಬಿದ್ದು 8 ವರ್ಷದ ಬಾಲಕ ಸಾವು! - Shimogga crime news
ವೆಲ್ಡಿಂಗ್ ಶಾಪ್ನವರ ಅಜಾಗರೂಕತೆಯಿಂದಾಗಿ ಅಂಗಡಿಗೆಂದು ಹೊರಟಿದ್ದ ಬಾಲಕನ ಕುತ್ತಿಗೆ ಮೇಲೆ ರಾಡ್ ಬಿದ್ದು ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಯುವರಾಜ(8) ಎಂಬ ಬಾಲಕ ತನ್ನ ಮನೆಯಿಂದ ಅಂಗಡಿಗೆಂದು ಹೊರಟಿದ್ದ. ಅಲ್ಲೇ ರಸ್ತೆಯ ಪಕ್ಕದಲ್ಲಿದ್ದ ವೆಂಕಟೇಶ್ವರ ಇಂಡಸ್ಟ್ರಿಯವರು ರಸ್ತೆಯ ಮೇಲೆಯೇ ದಪ್ಪನೆಯ ಕಬ್ಬಿಣದ ರಾಡ್ಗಳಿಗೆ ಬಣ್ಣ ಹಚ್ಚುತ್ತಿದ್ದರು. ಈ ವೇಳೆ ಅಂಗಡಿಗೆ ಹೊರಟಿದ್ದ ಬಾಲಕನ ಕುತ್ತಿಗೆ ಮೇಲೆ ರಾಡ್ ಬಿದ್ದಿದೆ ಎನ್ನಲಾಗಿದೆ. ರಾಡ್ ಬಿದ್ದ ಪರಿಣಾಮ ಬಾಲಕ ರಸ್ತೆಯಲ್ಲಿಯೇ ರಕ್ತಕಾರಿಕೊಂಡು ಒದ್ದಾಡಿದ್ದಾನೆ. ಬಾಲಕನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.
ಮೃತ ಬಾಲಕ ವೆಂಕಟೇಶ್ವರ ನಗರದ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ. ಒಂದು ವರ್ಷದ ಹಿಂದಷ್ಟೇ ಬಾಲಕನ ತಂದೆ ತೀರಿ ಹೋಗಿದ್ದರು. ಆತನ ತಾಯಿ ಅಂಬಿಕಾ, ಬೇರೆಯವರ ಮನೆ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದರು. ಈಗ ವೆಲ್ಡಿಂಗ್ ಶಾಪ್ನವರ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿದ್ದು ತಾಯಿಯ ರೋದನೆ ಮುಗಿಲು ಮುಟ್ಟಿದೆ. ಸಂಬಂಧಪಟ್ಟ ಇಲಾಖೆ ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕಿದೆ.ಸ್ಥಳಕ್ಕೆ ದೊಡ್ಡಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.