ಶಿವಮೊಗ್ಗ:ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಕೆ ಎಸ್ ಈಶ್ವರಪ್ಪ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮೊದಲಿಗೆ ಚೋರಡಿ ಬಳಿಯ ಕುಮದ್ವತಿ ನದಿಗೆ ತೆರಳಿದ ಬಿಜೆಪಿ ನಾಯಕರು, ನಿನ್ನೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದ ವ್ಯಕ್ತಿಯ ಶವ ಪತ್ತೆಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಎನ್ಡಿಆರ್ಎಫ್ ತಂಡ ಶವ ಹುಡುಕಲು ಆಗಮಿಸಲಿದೆ ಎಂದು ತಿಳಿಸಿ ಅಲ್ಲಿಂದ ನೇರವಾಗಿ ತೀರ್ಥಹಳ್ಳಿ ತಾಲೂಕಿನ ಕನ್ನಂಗಿ ಗ್ರಾಮಕ್ಕೆ ಭೇಟಿ ನೀಡಿದರು.
ಬಿಜೆಪಿ ತಂಡದಿಂದ ಮಳೆಹಾನಿ ಪ್ರದೇಶಕ್ಕೆ ಭೇಟಿ.. ಮೊನ್ನೆ ಸುರಿದ ಭಾರಿ ಮಳೆಯಿಂದಾಗಿ ಕುಂಟೆ ಹೊಳೆ ಉಕ್ಕಿ ಹರಿದಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾದ ಪರಿಣಾಮ ನಾಯಕರ ತಂಡ ಆ ಸ್ಥಳಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಹಾಗೆ ತಾಲೂಕು ಅಧಿಕಾರಿಗಳಿಂದ ಹಾನಿಯ ಕುರಿತು ಮಾಹಿತಿ ಪಡೆದುಕೊಂಡರು.
ನಂತರ ತೀರ್ಥಹಳ್ಳಿ ತಾಲೂಕಿನ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಕೆ ಎಸ್ ಈಶ್ವರಪ್ಪ, ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ಮಳೆ ಸುರಿದಿದ್ದು, ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಕಳೆದ ತಿಂಗಳು ನೀರಿಲ್ಲ ಅಂತಾ ಹೇಳುತ್ತಿದ್ದ ನಾವು ಈಗ ಸಾಕಪ್ಪ ಎನ್ನುವಷ್ಟು ನೀರು ತುಂಬಿಕೊಂಡಿದೆ. ಇದರಿಂದ ಎಲ್ಲಾ ಕಡೆ ಅತಿವೃಷ್ಟಿಯಾಗಿದೆ. ಸಾಕಷ್ಟು ಮನೆಗಳು ಬಿದ್ದಿವೆ. ಕೆಲವು ಕಡೆ ಭಾಗಶಃ ಮನೆ ಹಾನಿಯಾಗಿವೆ. ಇದರಿಂದ ಅಧಿಕಾರಿಗಳು ಸರ್ವೆ ನಡೆಸಿ, ವರದಿ ನೀಡಬೇಕಿದೆ ಎಂದರು. ನಮ್ಮ ತಂಡ ಮೂರು ಜಿಲ್ಲೆಗಳ ಪ್ರವಾಸ ಮುಗಿಸಿದೆ. ಸದ್ಯಕ್ಕೆ ತಾತ್ಕಾಲಿಕ ವರದಿಯನ್ನು ನಮ್ಮ ರಾಜ್ಯಾಧ್ಯಕ್ಷರಿಗೆ ನೀಡುತ್ತೇವೆ. ನಂತ್ರ ಅಂತಿಮ ವರದಿ ನೀಡುತ್ತೇವೆ ಎಂದರು.