ಶಿವಮೊಗ್ಗ: ರಾಜ್ಯದಲ್ಲಿ ಜಾತಿವಾರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಮೂಲಕ ಅಭಿವೃದ್ಧಿಗೆ ಮುಂದಾಗಿರುವುದಕ್ಕೆ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ.
ನಿಗಮ ಮಂಡಳಿ ಸ್ಥಾಪನೆ ಕುರಿತು ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರೇ ಹೇಳಿದ್ದಾರೆ. ಕೆಎಸ್ಆರ್ಟಿಸಿ ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸಿಎಂ ಯಡಿಯೂರಪ್ಪನವರು ಎಲ್ಲಾ ಸಮಾಜಕ್ಕೆ ನಿಗಮ ಮಂಡಳಿ ಮಾಡಲು ಹೊರಟಿದ್ದಾರೆ. ಸಿಎಂ ಮಂತ್ರಿಮಂಡಲವನ್ನು ವಜಾಗೊಳಿಸಿ, ಎಲ್ಲಾ ಸಮಾಜದ ಅಭಿವೃದ್ಧಿ ಮಂಡಳಿ ಮಾಡಿ, ಅದರ ಮೂಲಕವೇ ಅಭಿವೃದ್ಧಿ ಕಾರ್ಯ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನೂ ಉತ್ತರ ಕರ್ನಾಟಕದ ಜನ ನೆರೆಯಿಂದ ತತ್ತರಿಸಿದ್ದು, ಇನ್ನೂ ಅವರಿಗೆ ಪರಿಹಾರ ನೀಡಿಲ್ಲ. ಕೆಲವು ಸಮಾಜಗಳಿಗೆ ಅಭಿವೃದ್ಧಿ ಮಂಡಳಿ ಮಾಡಿರುವುದು ಸಂತಸದ ಸಂಗತಿ. ಆದರೆ ಜಾತಿ ನಿಗಮ ಮಂಡಳಿ ಮಾಡುವುದಾದರೆ ಎಲ್ಲಾ ಸಮಾಜಗಳಿಗೆ ಮಾಡಲಿ, ಉಳಿದ ಸಮುದಾಯಗಳು ಏನು ಅನ್ಯಾಯ ಮಾಡಿವೆ ಎಂದು ಪ್ರಶ್ನಿಸಿದರು.
ನೆರೆಯಿಂದ ಮನೆ ಕಳೆದುಕೊಂಡವರಿಗೆ ಕಳೆದ ವರ್ಷ ಐದು ಲಕ್ಷ ರೂ. ಪರಿಹಾರ ನೀಡುತ್ತೇನೆ ಎಂದು ಕೊನೆಗೆ ಎರಡು ಲಕ್ಷ ರೂ. ಕೊಟ್ಟರು. ಆದರೆ ಇದೀಗ ಮಂಡಳಿ ಮಾಡಿ 500 ಕೋಟಿ ನೀಡಲು ಸಿಎಂ ಮುಂದಾಗಿರುವುದು ಸರಿಯಲ್ಲ. ರಾಜಕೀಯ ಉದ್ದೇಶದಿಂದ ಜಾತಿ ಅಭಿವೃದ್ಧಿ ಮಂಡಳಿ ರಚಿಸುತ್ತಿದ್ದಾರೆ ಎಂದು ಬೇಳೂರು ಟೀಕಿಸಿದ್ದಾರೆ.
ಇನ್ನು ವಿಜಯೇಂದ್ರನಿಂದಲೇ ಚುನಾವಣೆ ಗೆಲ್ಲುತ್ತಾರೆ ಎಂದಾದರೆ ಉಳಿದ ನಾಯಕರು ಕೈಲಾಗದವರು ಎಂದರ್ಥವಲ್ಲವೇ?, ಬಿಜೆಪಿ ರಾಜ್ಯಾಧ್ಯಕ್ಷರು, ಸಚಿವರು ಮುಖಂಡರು ಕೈಲಾಗದವರಾ?. ಹಣವನ್ನು ಹಂಚಿ ಶಿರಾ ಚುನಾವಣೆ ಗೆದ್ದಿದ್ದಾರೆ. ವಿಜಯೇಂದ್ರ ಹೋದಲ್ಲೆಲ್ಲಾ ಚುನಾವಣೆ ಗೆಲ್ಲುತ್ತಾರೆ ಎನ್ನುವುದಾದರೆ, ಕೆಜೆಪಿ ಕಟ್ಟಿದಾಗ ಯಡಿಯೂರಪ್ಪ ನವರ ಪಕ್ಷವೇ ಸೋತಿದ್ದು ಏಕೆ? ಎಂದು ಪ್ರಶ್ನಿಸಿದರು.
ರೇಣುಕಾಚಾರ್ಯ ಇದೀಗ ಸ್ಟ್ರಾಂಗ್ ಆಗಿದ್ದಾರೆ. ಮೂಲ ವಲಸಿಗ ಎಂಬ ಪ್ರಶ್ನೆ ಎತ್ತಿದ್ದಾರೆ. ಮುಂದಿನ ಉಪಚುನಾವಣೆ ಒಳಗಾಗಿ ಯಡಿಯೂರಪ್ಪ ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.