ಶಿವಮೊಗ್ಗ:ಪಿಎಸ್ಐ ನೇಮಕಾತಿ ಪರೀಕ್ಷೆ ಹಾಗೂ ಸಹಾಯಕ ಪ್ರಾಧ್ಯಾಪಕಕರ ಹುದ್ದೆ ನೇಮಕದಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಶಿವಮೊಗ್ಗದಲ್ಲಿ ಆಗ್ರಹಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಇದು ಸರ್ಕಾರ ಕೆಳಗೆ ಇರುವ ಅಧೀನ ಸಂಸ್ಥೆಯಾಗಿದೆ. ಇವರು ತಳಮಟ್ಟದ ಅಧಿಕಾರಿಗಳನ್ನು ಬಂಧಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರೆತು ಹಗರಣದ ಹಿಂದಿರುವ ದೊಡ್ಡವರನ್ನು ವಿಚಾರಣೆಗೆ ಒಳಪಡಿಸುತ್ತಿಲ್ಲ. ಇದರಿಂದ ರಾಜ್ಯ ಕಾಂಗ್ರೆಸ್ ಪಕ್ಷ ಪಿಎಸ್ಐ ಹಗರಣವನ್ನು ಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ತಕ್ಷಣ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.
ಓದಿ:ಪಿಎಸ್ಐ ನೇಮಕಾತಿ ಹಗರಣ: ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗಳು
ಈ ಪ್ರಕರಣದಲ್ಲಿ ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್ಗಳ ಬಂಧನವಾಗಿದೆ. ಇಲ್ಲಿ ದೊಡ್ಡಮಟ್ಟದ ನಾಯಕರುಗಳು ಶಾಮೀಲಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದಲೇ 73 ಜನ ಪಿಎಸ್ಐಗಳಾಗಿ ನೇಮಕವಾಗಿದ್ದಾರೆ. ಅದೇ ರೀತಿ, ಅಫಜಲ್ಪುರದಲ್ಲಿ 23 ಜನ ನೇಮಕವಾಗಿದ್ದಾರೆ. ಪಿಎಸ್ಐ ಪರೀಕ್ಷೆ ನಡೆಯುವಾಗ ಯಾರು ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಅವರ ಪೋನ್ ಮಾತುಕತೆಯನ್ನು ಸಮಗ್ರವಾಗಿ ತನಿಖೆ ನಡೆಸಿದರೆ ಸತ್ಯ ಹೊರ ಬರುತ್ತದೆ ಎಂದರು.
ಪಿಎಸ್ಐ ಹಗರಣದಲ್ಲಿ ಶಿವಮೊಗ್ಗದವರು ಭಾಗಿಯಾಗಿದ್ದಾರೆ. ಫೋನ್ ಸಂಭಾಷಣೆ ಆಲಿಸಿದರೆ ಮಾತ್ರ ಸತ್ಯ ಹೊರಬರುತ್ತದೆ. ಈಗಾಗಲೇ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮದಲ್ಲಿ ಧಾರವಾಡ ವಿವಿಯ ನಾಗರಾಜ್ ಅವರನ್ನು ಬಂಧಿಸಲಾಗಿದೆ. ಇದರಿಂದ ಇದನ್ನು ಸಹ ತನಿಖೆ ನಡೆಸಬೇಕು. ಗೃಹ ಸಚಿವ ಆರಗ ಜ್ಞಾನೇಂದ್ರ ಒಳ್ಳೆಯವರು ಇರಬಹುದು. ಆದರೆ ಇಲಾಖೆ ನಿರ್ವಹಣೆಯಲ್ಲಿ ಅಸಮರ್ಥಯಾಗಿದ್ದಾರೆ ಎಂದರು.