ಶಿವಮೊಗ್ಗ: ಸೈಬರ್ ಅಪರಾಧ ತಡೆಯಲು ಸಾಮಾನ್ಯ ಪೊಲೀಸರಿಂದ ಸಾಧ್ಯವಿಲ್ಲ. ಅದಕ್ಕೆ ನುರಿತ ಪೊಲೀಸರು ಮತ್ತು ಜಾಗೃತಿ ಅಗತ್ಯ ಎಂದು ಪೂರ್ವ ವಲಯದ ಐಜಿಪಿ ಅಮ್ರಿತ್ ಪೌಲ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಿದೇಶದ ಯಾವುದೋ ಮೂಲೆಯಲ್ಲಿ ಕೂತು ಸೈಬರ್ ಮೂಲಕ ಅಪರಾಧ ನಡೆಸುತ್ತಾನೆ. ಅದನ್ನು ಪತ್ತೆ ಹಚ್ಚಲು ಪೊಲೀಸರಿಗೂ ಸೂಕ್ತ ತರಬೇತಿ ಅವಶ್ಯಕ ಎಂದರು.
ಪೂರ್ವ ವಲಯದ ಐಜಿಪಿ ಅಮ್ರಿತ್ ಪೌಲ್.. ಪೂರ್ವ ವಲಯದ ವಿಭಾಗದಲ್ಲಿ ಶಿವಮೊಗ್ಗ ಸುಂದರವಾದ ಜಿಲ್ಲೆ. ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದ ಅವರು, ಅಮ್ರಿತ್ ಪೌಲ್ ಅವರು ಈ ಹಿಂದೆ ನಕ್ಸಲ್ ನಿಗ್ರಹ ದಳದ ಅಧಿಕಾರಿಯಾಗಿ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ ಕುರಿತು ತಮ್ಮ ನೆನಪನ್ನು ಹಂಚಿಕೊಂಡರು. ಗಾಂಜಾ ಮಾರಾಟ ಪ್ರಕರಣಗಳು ಇಲ್ಲಿ ದಾಖಲಾಗುತ್ತಿವೆ. ಗಾಂಜಾ ಮಾರಾಟಕ್ಕೆ ಬ್ರೇಕ್ ಹಾಕುವುದಕ್ಕಿಂತ ಅದನ್ನು ಬೆಳೆಯುವುದನ್ನು ತಡೆಯಬೇಕಿದೆ ಎಂದರು.
ಇತ್ತಿಚೇಗೆ ಐಜಿಪಿ ನೇತೃತ್ವದ ತಂಡ ನಡೆಸುತ್ತಿರುವ ಮರಳು, ಜೂಜು ಅಡ್ಡೆಗಳ ಮೇಲಿನ ದಾಳಿಯ ಕುರಿತು ಪ್ರತಿಕ್ರಿಯಿಸಿದ ಪೌಲ್, ಜಿಲ್ಲೆಯಲ್ಲಿ ಉತ್ತಮ ಪೊಲೀಸ್ ಅಧಿಕಾರಿಗಳಿದ್ದಾರೆ. ನಮ್ಮ ಕಚೇರಿಯಲ್ಲಿ ಇಬ್ಬರು ಡಿವೈಎಸ್ಪಿ, ಇನ್ಸ್‌ಪೆಕ್ಟರ್ಸ್ ಇದ್ದಾರೆ. ಅವರೂ ಸಹ ಕೆಲಸ ಮಾಡಲಿ ಬಿಡಿ ಎಂದು ತಮ್ಮ ನೇತೃತ್ವದ ತಂಡದ ದಾಳಿ ಸಮರ್ಥಿಸಿಕೊಂಡರು. ಮಟ್ಕಾ, ಜೂಜಾಟಕ್ಕೆ ಮಟ್ಟ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.