ಶಿವಮೊಗ್ಗ:ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ರಾಜ್ಯದ ಎಲ್ಲ ಯಾತ್ರಾತ್ರಿಗಳನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ರಾಜ್ಯದ ಯಾತ್ರಾತ್ರಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆ ತರಲು ರಾಜ್ಯ ಸರ್ಕಾರ ಬದ್ದವಾಗಿದೆ. ಇದಕ್ಕಾಗಿ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ಕೇಂದ್ರದ ಜೊತೆ ಸಂಪರ್ಕದಲ್ಲಿದೆ ಎಂದರು.
ಮಳೆ ಪರಿಹಾರ ಒದಗಿಸಲು ಕ್ರಮ: ಇನ್ನು ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಈ ಕುರಿತು ಸಿಎಂ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಮಳೆ ಹಾನಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ಎಲ್ಲ ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ಮಳೆ ಹಾನಿಯನ್ನು ತಡೆಯಲು ಆಗಲ್ಲ, ಆದರೆ, ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಮಳೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಬಳಿ ಹಣ ನೀಡಲಾಗಿದೆ. ಈ ಹಣವನ್ನು ಖರ್ಚು ಮಾಡಲು ಸೂಚಿಸಲಾಗಿದೆ ಎಂದರು.
ಯಾರಿಗೂ ಅಗೌರವವನ್ನುಂಟು ಮಾಡಿಲ್ಲ: ಹರ್ಷ ಸಹೋದರಿ ಅಶ್ವಿನಿ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಹರ್ಷನ ಕುಟುಂಬದವರ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಕಾರಣ ಅವರ ಕುಟುಂಬದವರ ಬಗ್ಗೆ ನಮಗೆ ಗೌರವವಿದೆ. ನಾನು ಕೂಡ ತಕ್ಷಣ ಹೋಗಿ ಸಾಂತ್ವನ ಹೇಳಿದ್ದೇನೆ. ಏನೂ ಮಾಡಬೇಕು ಎಲ್ಲವನ್ನು ಮಾಡಲಾಗಿದೆ ಎಂದರು.