ಶಿವಮೊಗ್ಗ: ಆಧುನಿಕತೆ ಯುಗದಲ್ಲಿ ಶೈಕ್ಷಣಿಕ ಹಾಗೂ ತಾಂತ್ರಿಕತೆಗೆ ಹೆಚ್ಚು ಮಾನ್ಯತೆ ದೊರಕುತ್ತಿರುವ ಹಿನ್ನೆಲೆ, ಕೃಷಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಹೀಗಾಗಿ ಕೃಷಿಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಪಿ ವೀರಭದ್ರಪ್ಪ ಹೇಳಿದ್ದಾರೆ.
ನವಲೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಏರ್ಪಡಿಸಿದ್ದ ನೆರೆ ಮತ್ತು ಬರ ನಿರ್ವಹಣೆಯಲ್ಲಿ ಕೃಷಿ ತಾಂತ್ರಿಕತೆ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತು ಆಧುನಿಕವಾಗಿ ಎಷ್ಟೇ ಮುಂದುವರೆದರೂ ಮನುಷ್ಯನ ಜೀವನದಲ್ಲಿ ಕೃಷಿಯೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆದರೆ, ದೇಶದ ಬೆನ್ನೆಲುಬು ಎನಿಸಿಕೊಂಡಿರುವ ರೈತ ಇಂದು, ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದಾನೆ. ರೈತನ ಆಧಾರವಾಗಿರುವ ಕೃಷಿ ಕ್ಷೇತ್ರ ಇಂದು ಅತಿವೃಷ್ಠಿ ಅನಾವೃಷ್ಠಿಗಳಿಂದ ನಲಗುತ್ತಿದೆ. ಇಂತಹ ಸಂದರ್ಭದಲ್ಲಿ ಆತನಿಗೆ ಪ್ರೋತ್ಸಾಹ ಸಿಗದಿದ್ದರೆ ಮುಂದೊಂದು ದಿನ ನಾವೆಲ್ಲರೂ ಅನ್ನಕ್ಕಾಗಿ ಪರದಾಡುವಂತಹ ಸ್ಥಿತಿ ಉದ್ಬವವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಎಚ್ಚರಿಸಿದರು.