ಶಿವಮೊಗ್ಗ:ಯುವಕನಿಗೆ ಚಾಕು ಇರಿದ ಪ್ರಕರಣದ ಪ್ರಮುಖ ಆರೋಪಿ ಜಬೀವುಲ್ಲಾ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಈ ಸಂಬಂಧ ಆರೋಪಿ ಪತ್ನಿ ಶಬಾನ ಪ್ರತಿಕ್ರಿಯಿಸಿದ್ದು, ನನ್ನ ಪತಿ ಅಮಾಯಕ. ಅವರ ಮೇಲೆ ಸುಮ್ಮನೆ ಕೇಸ್ ಹಾಕಿ, ಕಾಲಿಗೆ ಶೂಟ್ ಮಾಡಲಾಗಿದೆ. ಇದರ ವಿರುದ್ಧ ನ್ಯಾಯಾಲಯಕ್ಕೆ ಹಾಗೂ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲಾಗುವುದು ಎಂದು ಜಬೀವುಲ್ಲಾ ಪತ್ನಿ ಶಬಾನ ಹೇಳಿದ್ದಾರೆ.
ನಗರದ ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ದೊಡ್ಡಪೇಟೆ ಪೊಲೀಸರು ಸ್ವಾತಂತ್ರ್ಯ ದಿನಾಚರಣೆ ದಿನ ರಾತ್ರಿ 9:30 ರ ಸುಮಾರಿಗೆ ಮನೆಗೆ ಬಂದು ಊಟ ಮಾಡುತ್ತಿದ್ದ ನನ್ನ ಪತಿಯನ್ನು ಬೈಕ್ನಲ್ಲಿ ಕರೆದುಕೊಂಡು ಹೋದರು. ಆದರೆ ಬೆಳಗ್ಗೆ 7 ಗಂಟೆಗೆ ಅವರ ಕಾಲಿಗೆ ಗುಂಡು ಹೊಡೆಯಲಾಗಿದೆ ಎಂಬ ವಿಷಯ ತಿಳಿಯಿತು.
ಸುಳ್ಳು ಕೇಸ್ ಹಾಕಿ ಶೂಟ್:ಮನೆಯಲ್ಲಿದ್ದವರನ್ನು ಕರೆದುಕೊಂಡು ಹೋಗಿ ಕಾಲಿಗೆ ಶೂಟ್ ಮಾಡಲಾಗಿದೆ. ಅಂದು ರಾತ್ರಿ 2:30 ಕ್ಕೆ ಠಾಣೆಯಿಂದ ಕರೆದುಕೊಂಡು ಹೋಗಿ, ನಂತರ ಬೆಳಗಿನ ಜಾವ ನನ್ನ ಕಾಲಿಗೆ ಶೂಟ್ ಮಾಡಲಾಗಿದೆ ಎಂದು ನನ್ನ ಪತಿ ನಾನು ಆಸ್ಪತ್ರೆಗೆ ಹೋದಾಗ ತಿಳಿಸಿದ್ದಾರೆ ಎಂದು ಶಬಾನ ಹೇಳಿದ್ದಾರೆ. ನನ್ನ ಪತಿ ಮೇಲೆ ಈ ಹಿಂದೆ ಒಂದೆರಡು ಕೇಸ್ಗಳು ಇದ್ದವು. ಈಗ ಅವುಗಳಿಂದ ಹೊರ ಬರುತ್ತಿದ್ದಾರೆ. ಆದರೆ ಬದಲಾಗುತ್ತಿದ್ದವರನ್ನು ಚಾಕು ಹಾಕಿದ್ದಾರೆ ಎಂದು ಸುಳ್ಳು ಕೇಸ್ ಹಾಕಿ ಶೂಟ್ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.