ಶಿವಮೊಗ್ಗ:ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡಿಸಿ ಮನೆಗೆ ಮುತ್ತಿಗೆ ಹಾಕಿದವರೆಲ್ಲರೂ ನಮ್ಮ ಹುಡುಗರೇ, ಕರೆದು ಅವರಿಗೆ ಬುದ್ಧಿ ಹೇಳುತ್ತೇವೆ ಎಂದು ಸಂಜೆ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿಭಟನೆಗೆ ಬಂದಾಗ ಕೆಲವರು ಅತಿರೇಕದಿಂದ ವರ್ತಿಸಿದ್ದಾರೆ. ಅದರಲ್ಲಿ ಕೆಲವರು ಒಂದೆರಡು ಪಾಟ್ ಒಡೆದು ಹಾಕಿದ್ದಾರೆ. ಅವರೆಲ್ಲಾ ಬಂದಿದ್ದು, ಎಸ್ಎಫ್ಐ ಹಾಗೂ ಮತಾಂಧ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲು ಬಂದಿದ್ದರು. ನಾನು ಮನೆಯಲ್ಲಿ ಇಲ್ಲದಾಗ ಸಹಜವಾಗಿ ಮನೆಯಲ್ಲಿ ಯಾರೂ ಇರಲ್ಲ, ಒಂದಿಬ್ಬರು ಪೊಲೀಸರು ಇರ್ತಾರಷ್ಟೇ. ಭದ್ರತೆಗೆ ನಾನು ಮೊದಲೇ ಹೆಚ್ಚಿನ ಪೊಲೀಸ್ ಬೇಡ ಎಂದು ಹೇಳಿದ್ದೇನೆ. ಆದರೆ, ಗೃಹ ಸಚಿವರಿಗೆ ನೀಡಬೇಕಾದ ಭದ್ರತೆ ನೀಡಿದ್ದಾರೆ. ಇಂದು ನಮ್ಮ ಮನೆಗೆ ಬಂದವರು ಸಲುಗೆಯಿಂದ ಬಂದಿದ್ದಾರೆ ಎಂದು ಸಚಿವರು ನಕ್ಕರು.
ನಾವು ಫಾಝಿಲ್ ಮನೆಗೆ ಹೋಗಬಾರದೆಂದು ಇಲ್ಲ:ನಾವು ಅಂದು ಮಂಗಳೂರಿಗೆ ಹೋದಾಗ ರಾತ್ರಿ ಕೊಲೆ ಆಗಿದೆ. ಅಲ್ಲದೆ ನಾವು ಬೆಂಗಳೂರಿಗೆ ವಾಪಸ್ ಹೋಗಬೇಕಾಗಿದ್ದ ಕಾರಣ ಫಾಝಿಲ್ ಮನೆಗೆ ಹೋಗಲು ಆಗಿಲ್ಲ. ಅವರ ಮನೆಗೆ ಹೋದ್ರೆ ನಮ್ಮದೇನು ಘನತೆ ಹೋಗಲ್ಲ. ಅಲ್ಲದೆ, ಅಲ್ಲಿನ ಪರಿಸ್ಥಿತಿ ಸರಿ ಇಲ್ಲದ ಕಾರಣ ನಾವು ಹೋಗಲು ಆಗಲಿಲ್ಲ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದರು.