ಶಿವಮೊಗ್ಗ: ಮನುಷ್ಯನ ದೇಹದಲ್ಲಿ ರಕ್ತದ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಅಂತಾರೆ ವೈದ್ಯರು. ಆದರೆ, ಈ ಬಾಲಕಿ ದೇಹದಲ್ಲಿ ಆರು ವರುಷಗಳಿಂದ ರಕ್ತವೇ ಉತ್ಪತ್ತಿಯಾಗುತ್ತಿಲ್ಲ ಎಂದರೆ ನೀವು ನಂಬಲೇಬೇಕು.
ಹೌದು.., 9 ತಿಂಗಳು ಮಗುವಿದ್ದಾಗಲೇ ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಹೋಗಿದೆ. ಇದ್ದಕ್ಕಿದ್ದಂತೆ ಊಟ - ತಿಂಡಿಬಿಟ್ಟು ನೋವಿನಿಂದ ಬಳಲುತ್ತಿದ್ದ ಮಗಳ ವರ್ತನೆ ಕಂಡ ಪೋಷಕರು ಆಸ್ಪತ್ರೆಯ ಮೆಟ್ಟಿಲೇರಿದಾಗ ಇವಳಿಗೆ ದೇಹದಲ್ಲಿ ರಕ್ತ ಉತ್ಪತ್ತಿಯೇ ಆಗದ ವಿಚಿತ್ರ ಕಾಯಿಲೆ ಇದೆ ಎಂಬುದು ತಿಳಿದಿದೆ.
ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ನಿವಾಸಿ ಮಂಜಪ್ಪ ಹಾಗೂ ಲಕ್ಷ್ಮಿ ದೇವಿ ದಂಪತಿಗಳ ಪುತ್ರಿ ಹೇಮಾವತಿ, ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಸುಮಾರು ಆರು ವರ್ಷಗಳೇ ಕಳೆದಿವೆ. ರಕ್ತಹೀನತೆಯಿಂದಾಗಿ ಇದ್ದಕ್ಕಿಂದಂತೆ ಒದ್ದಾಡುವ ಮಗಳ ಸಂಕಟ ನೋಡದೆ ಆಕೆಯ ಪೋಷಕರು ಸರಕಾರಿ, ಖಾಸಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದರೂ ಸೂಕ್ತ ಚಿಕಿತ್ಸೆ ಸಿಗದೇ ಕಂಗಾಲಾಗಿದ್ದಾರೆ. ಈ ಬಾಲಕಿಯ ದೇಹದಲ್ಲಿ ರಕ್ತ ಉತ್ಪಾದನೆ ಆಗದಿರುವುದರಿಂದ ಪ್ರತಿ 20 ದಿನಕ್ಕೊಮ್ಮೆ ರಕ್ತ ಕೊಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈಕೆಯ ಪೋಷಕರು ಇದಕ್ಕಾಗಿಯೇ ಪ್ರತಿ ತಿಂಗಳು 4 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಬೇಕಿದೆ. ನಾನಾ ಪ್ರಯತ್ನದ ನಡುವೆಯೂ ಗುಣಮುಖವಾಗದಿರುವುದು ವೈದ್ಯರಿಗೂ ಸವಾಲಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದ್ದಾರೆ.