ಶಿವಮೊಗ್ಗ: ಕಿಡಿಗೇಡಿಗಳು ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿ ಮಾಡಿರುವ ಘಟನೆ ನಗರದ ಸಿದ್ದಯ್ಯ ರಸ್ತೆ, ಉಪ್ಪಾರ ಕೇರಿ ಬಳಿ ನಡೆದಿದೆ.
ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜು ಜಖಂಗೊಳಿಸಿದ ಕಿಡಿಗೇಡಿಗಳು ನಿನ್ನೆ ರಾತ್ರಿ 1.30ರ ಸುಮಾರಿಗೆ ಬೈಕ್ನಲ್ಲಿ ಬಂದ ನಾಲ್ವರು ಯುವಕರು, ಮನೆಗಳ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದ 11 ಕಾರು, 6 ಬೈಕ್ ಹಾಗು ನಾಲ್ಕಕ್ಕೂ ಅಧಿಕ ಆಟೋಗಳ ಗಾಜು ಒಡೆದಿದ್ದಾರೆ. ಹೀಗೆ ಜಖಂಗೊಂಡ ವಾಹನಗಳಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷರ ಕಾರು ಸಹ ಸೇರಿದೆ.
ವಾಹನಗಳ ಗಾಜು ಧ್ವಂಸಗೊಳಿಸಿದ ನಾಲ್ವರ ಪೈಕಿ ಇಬ್ಬರನ್ನು ನಿನ್ನೆ ರಾತ್ರಿಯೇ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರು ಗಾಂಜಾ ಸೇವಿಸಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಸಚಿವ ಈಶ್ವರಪ್ಪ, ಎಸ್ಪಿ ಭೇಟಿ
ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿನ್ನೆಯೇ ಇಬ್ಬರು ಸಿಕ್ಕಿಬಿದ್ದಿದ್ದು, ಇನ್ನಿಬ್ಬರನ್ನು ಕೂಡಲೇ ಬಂಧಿಸುವಂತೆ ಈಶ್ವರಪ್ಪ ಎಸ್ಪಿ ಅವರಿಗೆ ಸೂಚಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಚಿವ ಈಶ್ವರಪ್ಪ, ಎಸ್ಪಿ ಭೇಟಿ ನಂತರ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಸದ್ಯ ಕಾರು, ಬೈಕ್ ಹಾಗು ಆಟೋ ಜಖಂ ಮಾಡಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಬಂಧಿತ ಇಬ್ಬರ ವಿಚಾರಣೆ ನಡೆಸಲಾಗುತ್ತಿದೆ. ಗಾಂಜಾ ಸೇವಿಸಿಯೇ ಈ ಕೃತ್ಯ ನಡೆಸಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಎಲ್ಲಾ ಕಡೆಯಿಂದಲೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಆಕ್ಸಿಜನ್ ದುರಂತ: ಚಾಮರಾಜನಗರ ಡಿಸಿ ಡಾ.ಎಂ.ಆರ್.ರವಿ ಎತ್ತಂಗಡಿ?