ಶಿವಮೊಗ್ಗ: ಹೊರ ರಾಜ್ಯದಿಂದ ಬರಲು 300 ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.
ಈವರೆಗೂ ಜಿಲ್ಲೆಯಲ್ಲಿ 7,230 ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 34 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. 6847 ಮಾದರಿ ಫಲಿತಾಂಶ ಬಂದಿದೆ. ಇನ್ನೂ 349 ಮಾದರಿ ಫಲಿತಾಂಶ ಬರಬೇಕಿದೆ. ಗಂಟಲ ದ್ರವ ಸಂಗ್ರಹಿಸಿದ ನಂತರ ಅದರ ಫಲಿತಾಂಶ ಬರಲು ಕನಿಷ್ಠ 24 ಗಂಟೆ ಹಾಗೂ ಗರಿಷ್ಠ 36 ಗಂಟೆಗಳು ಬೇಕಾಗುತ್ತದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಕ್ವಾರಂಟೈನ್ನ ಹೊಸ ಆದೇಶ ಪಾಲನೆ
ರಾಜ್ಯ ಸರ್ಕಾರ ಕ್ವಾರಂಟೈನ್ಗಾಗಿ ಹೊಸ ಆದೇಶ ಹೊರಡಿಸಿದೆ. ಅದರಲ್ಲಿ ರೆಡ್ ಝೋನ್ ರಾಜ್ಯಗಳಿಂದ ಬಂದವರಿಗೆ 7 ದಿನ ಕ್ವಾರಂಟೈನ್ ಮಾಡಲಾಗುವುದು. ಇವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಏಳನೇ ದಿನ ಪರೀಕ್ಷೆ ನಡೆಸಲಾಗುವುದು. ಆಗ ಪಾಸಿಟಿವ್ ಬರದಿದ್ದರೆ ಮನೆಗೆ ಕಳುಹಿಸಲಾಗುವುದು ಎಂದರು.
ಕೊರೊನಾ ಪಾಸಿಟಿವ್ ಸಂಖ್ಯೆ ಕಡಿಮೆ ಇರುವ ರಾಜ್ಯಗಳಿಂದ ಬಂದರೆ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುತ್ತದೆ. ಜಿಲ್ಲೆಯಲ್ಲಿ 5 ಕಂಟೇನ್ಮೆಂಟ್ ಝೋನ್ಗಳನ್ನು ಗುರುತಿಸಲಾಗಿದೆ. ಇಲ್ಲಿನ ನಿವಾಸಿಗಳಿಗೆ ಬೇಕಾದ ತರಕಾರಿ, ಮೆಡಿಕಲ್ ವ್ಯವಸ್ಥೆಯನ್ನು ಮಾಡಲಾಗಿದೆ. ಅನಾವಶ್ಯಕವಾಗಿ ಸುತ್ತಾಡದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಈವರೆಗೂ ಜಿಲ್ಲೆಗೆ ಸೇವಾ ಸಿಂಧು ಮೂಲಕ 1,544 ಮಂದಿ ಬಂದಿದ್ದಾರೆ. ಅದರಲ್ಲಿ ಮಹಾರಾಷ್ಟ್ರದಿಂದ 548, ತಮಿಳುನಾಡು-228, ಆಂಧ್ರ-166, ತೆಲಂಗಾಣ-122, ಕೇರಳದಿಂದ 112 ಜನ ಬಂದಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.