ಶಿವಮೊಗ್ಗ: ಕದ್ದ ಬೈಕ್ನಲ್ಲಿ ಒಂದೇ ದಿನ ಏಳು ಕಡೆ ದರೋಡೆ ನಡೆಸಿದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಶಿವಮೊಗ್ಗ ಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ಆಯನೂರು ಗೇಟ್ ನಿವಾಸಿ ಗಗನ್(19), ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ನಿವಾಸಿಗಳಾದ ವಿಶಾಲ್(19) ಹಾಗೂ ಪ್ರೀತಮ್(19)ನನ್ನು ಬಂಧಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕ್, 10 ಮೊಬೈಲ್ ಹಾಗೂ ಒಂದು ವ್ಯಾನಿಟಿ ಬ್ಯಾಗ್ನಲ್ಲಿದ್ದ ಬೆಳ್ಳಿ ಸರವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ನವೆಂಬರ್ 2 ರಂದು ದಾವಣಗೆರ ಜಿಲ್ಲೆಯ ಸವಳಂಗ ಗ್ರಾಮದಲ್ಲಿ ಪಲ್ಸರ್ ಬೈಕ್ ಅನ್ನು ಕದ್ದಿದ್ದರು. ನವೆಂಬರ್ 4 ರಂದು ಶಿವಮೊಗ್ಗದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಕಡೆ, ತುಂಗಾನಗರ ಹಾಗೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಕಡೆ ವಿಳಾಸ ಕೇಳುವ ನೆಪದಲ್ಲಿ ಸರವನ್ನು ಎಗರಿಸಿದ್ದರು. ನಂತರ ಭದ್ರಾವತಿಯಲ್ಲಿ ಬೆಳಗಿನ ಜಾವ ಬಸ್ ಇಳಿದು ಮನೆಗೆ ಹೋಗುವವರನ್ನು ಬೆದರಿಸಿ ಅರ್ಧ ಗಂಟೆಯಲ್ಲಿ ಮೂರು ಕಡೆ ದರೋಡೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರು ಸಾವು
ಶಿವಮೊಗ್ಗ- ಭದ್ರಾವತಿ ಸೇರಿ ಒಟ್ಟು ಏಳು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಈ ಕುರಿತು ಪ್ರಕರಣ ಕೈಗೆತ್ತಿಕೊಂಡ ಕೋಟೆ ಪೊಲೀಸ್ ಠಾಣೆ ಪಿಐ ಚಂದ್ರಶೇಖರ್ ಹಾಗೂ ಅವರ ತಂಡ ಮೂವರನ್ನು ಬಂಧಿಸಿದೆ.