ಮೈಸೂರು: ಮಹಾರಾಜ ಮೈದಾನದಲ್ಲಿ ಯುವ ದಸರಾ ಮಹೋತ್ಸವ ನಡೆಯುತ್ತಿದ್ದು, ಮೈದಾನ ಕಿಕ್ಕಿರಿದು ತುಂಬಿತ್ತು. ಯುವ ಗಾಯಕ ಸಂಚಿತ್ ಹೆಗ್ಡೆ ಶಾಕುಂತ್ಲೆ ಸಿಕ್ಕಳು, ರೆ ರೆ ಭಜರಂಗಿ, ನಟಸಾರ್ವಭೌಮ ಹಿ ಇಸ್ ಕಿಂಗ್ ಆಫ್ ದ ಸಿನಿಮಾ, ಕಣ್ಮನಿ ಕಣ್ಮನಿ, ಹೃದಯಕೆ ಹೆದರಿಕೆ, ಓ ನಂದಿನಿ ಓ ನಂದಿನಿ, ಒಂದು ಮಳೆಬಿಲ್ಲು, ಟಗರು ಬಂತು ಟಗರು ಹೀಗೆ ಹಲವಾರು ಕನ್ನಡ ಹಾಡುಗಳನ್ನು ಹಾಡುವ ಮೂಲಕ ಯುವ ಮನಸ್ಸುಗಳಲ್ಲಿ ಸಂಚಲನ ಮೂಡಿಸಿದರು.
ಹಾಗೆಯೇ ಫೈರ್ ಬ್ರಾಂಡ್ ಗಾಯಕ ಚಂದನ್ ಶೆಟ್ಟಿ ಧಮ್ ಪವರ್, ಗೆಳೆಯ ಗೆಳೆಯ, ಮೂರೇ ಮೂರು ಪೆಗ್ಗಿಗೆ, ಪಕ್ಕಾ ಚಾಕೊಲೇಟ್ ಗರ್ಲ್, ಗೊಂಬೆ ಗೊಂಬೆ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದರು. ಯುವ ಸಂಭ್ರಮದಿಂದ ಯುವ ದಸರಾಕ್ಕೆ ಆಯ್ಕೆಯಾದ ಅತ್ಯುತ್ತಮ ತಂಡಗಳಾದ ಹಾಸನದ ಹೊಳೆ ನರಸೀಪುರ ತಾಲೂಕಿನ ಹೆಚ್.ಡಿ.ದೇವೇಗೌಡ ಸ್ನಾತಕೋತ್ತರ ಕಾಲೇಜು, ಮೈಸೂರಿನ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೇ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಹಾಗೂ ಹುಣಸೂರಿನ ಬಿಳಿಕೆರೆಯ ವಿದ್ಯಾವಾರಿಧಿ ಸಂಯುಕ್ತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಯಿತು.