ಮೈಸೂರು:ಕೋವಿಡ್ ನಿಯಮ ಉಲ್ಲಂಘಿಸಿ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ವರ್ತನೆಯನ್ನು ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿದ ಬಿ.ವೈ. ವಿಜಯೇಂದ್ರ ವರ್ತನೆಗೆ ಯತೀಂದ್ರ ಖಂಡನೆ
ಆಡಳಿತಾರೂಢ ಪಕ್ಷದ ಉಪಾಧ್ಯಕ್ಷನಾಗಿ, ಸಿಎಂ ಕುಟುಂಬದವರಾಗಿ ಜನಸಾಮಾನ್ಯರಿಗೆ ಮಾದರಿಯಾಗಬೇಕಾದವರೇ ನಿಯಮಗಳನ್ನು ಉಲ್ಲಂಘಿಸಿರೋದು ಅಕ್ಷಮ್ಯ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವಾಲಯಕ್ಕೆ ಆಗಮಿಸಲು ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಜನಸಾಮಾನ್ಯರಿಗೆ ದಂಡ ಹಾಕಿದ್ದಾರೆ, ಕಠೋರವಾಗಿ ಹೊಡೆದಿದ್ದಾರೆ. ಇಂತಹ ಸಂದರ್ಭದಲ್ಲಿ ಆಡಳಿತಾರೂಢ ಪಕ್ಷದ ಉಪಾಧ್ಯಕ್ಷನಾಗಿ, ಸಿಎಂ ಕುಟುಂಬದವರಾಗಿ ಜನಸಾಮಾನ್ಯರಿಗೆ ಮಾದರಿಯಾಗಬೇಕಾದವರೇ ನಿಯಮಗಳನ್ನು ಉಲ್ಲಂಘಿಸಿರೋದು ಅಕ್ಷಮ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಸಾಮಾನ್ಯರಿಗೆ ಒಂದು ನೀತಿ ವಿಐಪಿಗಳಿಗೊಂದು ನೀತಿ ಎಂಬ ಸಂದೇಶ ರಾಜ್ಯದ ಜನತೆಗೆ ಹೋಗುತ್ತದೆ. ನೀತಿ ನಿಯಮಗಳನ್ನು ಪಾಲಿಸುವ ವಿಚಾರದಲ್ಲಿ ಜನಸಾಮಾನ್ಯರಲ್ಲೂ ಗಂಭೀರತೆ ಹೋಗುತ್ತದೆ. ಆದ್ದರಿಂದ ಇದು ತಪ್ಪು. ತಪ್ಪು ಮಾಡಿದವರಿಗೆ ಹಾಗೂ ಸಹಕರಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಕ್ರಮ ಕೈಗೊಂಡಾಗ ಮಾತ್ರ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು ಎಂಬ ಸಂದೇಶ ಹೋಗುತ್ತದೆ ಎಂದಿದ್ದಾರೆ.