ಮೈಸೂರು: ಅಧಿಕಾರಕ್ಕೆ ಬರಲು ಬಿಜೆಪಿಯವರ ರೀತಿ ಆಪರೇಷನ್ ಮಾಡಬೇಕಿತ್ತಾ?, ಸಿಡಿ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಬೇಕಿತ್ತಾ? ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ, ಸಚಿವ ಕೆ.ಎಸ್.ಈಶ್ವರಪ್ಪರಿಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಹಸಿದ ಇಲಿ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಅಪ್ಪ ಸಿಎಂ ಆಗಬೇಕೆಂದಿದ್ದರೆ, ಬಿಜೆಪಿಯವರ ತರಹ ಆಪರೇಷನ್ ಕಮಲ ಮಾಡ್ತಿದ್ವಿ. ವಾಮ ಮಾರ್ಗದಿಂದ ಅಧಿಕಾರಕ್ಕೆ ಬರಲು ನಮಗೆ ಇಷ್ಟವಿಲ್ಲ. ಪ್ರಜಾಪ್ರಭುತ್ವಕ್ಕೆ ತಲೆಬಾಗುವವರು ನಾವು. ಸಿಡಿ ಮಾಡಿ ಬ್ಲಾಕ್‌ಮೇಲ್ ಮಾಡುವವರಲ್ಲ ಎಂದು ಕುಟುಕಿದರು.
ಸಿದ್ದರಾಮಯ್ಯ ಕುರುಬರಿಗೆ ಸಚಿವ ಸ್ಥಾನ ಕೊಡಲಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಕುರುಬರೇ ಸಿಎಂ ಆಗಿದ್ದಾಗ ಕುರುಬರಿಗೆ ಮಂತ್ರಿ ಸ್ಥಾನ ಕೊಡಬಾರದೆಂಬ ನಿಲುವಿಗೆ ಬಂದಿದ್ದು ನಿಜ. ಆದರೆ, ಇತರ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಬಿಜೆಪಿಯವರು ದಲಿತರು, ಹಿಂದುಳಿದವರಿಗೆ ಎಷ್ಟು ಸಚಿವ ಸ್ಥಾನ ಕೊಟ್ಟಿದ್ದಾರೆ? ಅವರ ಆತ್ಮಸಾಕ್ಷಿ ಹೇಳಲಿ ಎಂದು ಸವಾಲು ಹಾಕಿದರು.
ಜಮೀರ್ ನಿವಾಸದ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತ. ಐಟಿ, ಇಡಿ, ಸಿಬಿಐಯನ್ನು ಬಿಜೆಪಿ ತನ್ನ ಅಂಗ ಸಂಸ್ಥೆಗಳನ್ನಾಗಿ ಬಳಸಿಕೊಳ್ಳುತ್ತಿದೆ. ರಾಜಕೀಯ ಎದುರಾಳಿಗಳಿಗೆ ಈ ಮೂಲಕ ಬ್ಲ್ಯಾಕ್ ಮೇಲ್, ಒತ್ತಡ ಹೇರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.