ಮೈಸೂರು: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಕರ್ಣಕುಪ್ಪೆಯಲ್ಲಿ ನಡೆದಿದೆ. ಗಾಯಿತ್ರಮ್ಮ(55) ಮೃತರು. ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭಾನುವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದ ಕರ್ಣಕುಪ್ಪೆ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಅಡುಗೆ ಕೆಲಸ ನಿರ್ವಾಹಕ ಲೇ. ಗೋವಿಂದರಾಜು ಎಂಬುವವರ ಪತ್ನಿ ಗಾಯಿತ್ರಮ್ಮ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮದುವೆ ಮಾಡಿದ್ದಾರೆ. ಮಕ್ಕಳು ಬೇರೆ ಕಡೆ ವಾಸವಿರುವುದರಿಂದ ಗಾಯಿತ್ರಮ್ಮ ಮೃತಪಟ್ಟಿರುವ ವಿಷಯ ಯಾರಿಗೂ ತಿಳಿದಿರಲಿಲ್ಲ. ಸೋಮವಾರ ಗ್ರಾಮದಲ್ಲಿ ಶುಭ ಕಾರ್ಯ ಇತ್ತು. ಈ ಶುಭ ಕಾರ್ಯಕ್ಕೆ ಗಾಯಿತ್ರಮ್ಮ ಹೋಗದ ಕಾರಣ ಕಾರ್ಯಕ್ರಮದ ಮನೆಯವರು ಅವರ ಮನೆಗೆ ಊಟಕ್ಕೆ ಕರೆಯಲು ಹೋಗಿದ್ದರು. ಈ ವೇಳೆ ಅವರು ಮೃತ ಪಟ್ಟಿರುವ ವಿಚಾರ ಗೊತ್ತಾಗಿದೆ.
ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿದು ಬಂದು ನೋಡಿದಾಗ ಅವರ ದೇಹ ಸಿಡಿಲಿನ ಹೊಡೆತಕ್ಕೆ ಸುಟ್ಟು ಕರಕಲಾಗಿತ್ತು. ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ಇದನ್ನೂ ಓದಿ:ರಸ್ತೆ ವಿಭಜಕ ದಾಟಿ ಟಿಟಿ ವಾಹನಕ್ಕೆ ಕಾರು ಡಿಕ್ಕಿ: ಇಬ್ಬರು ದುರ್ಮರಣ, ಹಲವರಿಗೆ ಗಾಯ