ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಗೆ ಇಂದು ತೂಕ ಹಾಕುವ ಪ್ರಕ್ರಿಯೆ ನಡೆಸಲಾಯಿತು. ಈ ಬಾರಿ ಅರ್ಜುನನೇ ಬಲಶಾಲಿಯಾಗಿದ್ದಾನೆ. ನಿನ್ನೆ ಅರಮನೆ ಪ್ರವೇಶ ಮಾಡಿದ ಗಜಪಡೆಗೆ ತಾಲೀಮಿಗೂ ಮುನ್ನ ಅವುಗಳ ತೂಕವನ್ನು ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ ಮಾಜಿ ಕ್ಯಾಪ್ಟನ್ ಅರ್ಜುನ 5,660 ಕೆ.ಜಿ ಇದ್ದು, ಶಕ್ತಿ ಶಾಲಿಯಾಗಿದ್ದಾನೆ.
ಗೋಪಾಲಸ್ವಾಮಿ 5,140 ಕೆ.ಜಿ , ಕಾವೇರಿ 3,100 ಕೆ.ಜಿ , ಅಭಿಮನ್ಯು 4,770 ಕೆ.ಜಿ , ಮಹೇಂದ್ರ 4,250 ಕೆ.ಜಿ , ಲಕ್ಷ್ಮಿ 2,920 ಕೆ.ಜಿ , ಚೈತ್ರ 3,050 ಕೆ.ಜಿ , ಭೀಮ 3,920 ಕೆ.ಜಿ ಮತ್ತು ಧನಂಜಯ 4,810 ತೂಕ ಹೊಂದಿವೆ.
ದಸರಾ ಗಜಪಡೆಗಳಿಗೆ ತೂಕ ಹಾಕುವ ಪ್ರಕ್ರಿಯೆ ಬಳಿಕ ಮಾತನಾಡಿದ ಡಿಸಿಎಫ್ ಕರಿಕಾಳನ್, ಆನೆಗಳಿಗೆ ನಾಳೆ ಅಥವಾ ನಾಡಿದ್ದು ಅರಮನೆಯೊಳಗಡೆ ತಾಲೀಮು ನಡೆಯಲಿದೆ. ಅಗಸ್ಟ್ 14 ರಿಂದ ಅರಮನೆಯಿಂದ ಬನ್ನಿ ಮಂಟಪದವರೆಗೆ ತಾಲೀಮು ಆರಂಭವಾಗುತ್ತದೆ. ಆನೆಗಳ ತೂಕ ಹೆಚ್ಚಿಸುವುದು ನಮ್ಮ ಉದ್ದೇಶವಲ್ಲ, ಜೊತೆಗೆ ಆನೆಗಳನ್ನ ಆರೋಗ್ಯವಾಗಿ ನೋಡಿಕೊಳ್ಳುವುದು ನಮ್ಮ ಉದ್ದೇಶ. ಆನೆಗಳಿಗೆ ಈಗ ಪ್ರೋಟಿನ್ ಆಹಾರ ಹೆಚ್ಚಿಸುತ್ತೇವೆ. ದಸರಾ ಮುಗಿಯುವುದರೊಳಗಡೆ ಈ ಎಲ್ಲ ಆನೆಗಳ ತೂಕ ಹೆಚ್ಚು ಕಮ್ಮಿ 500 ಕೆ.ಜಿ ಹೆಚ್ಚಾಗುತ್ತದೆ ಎಂದರು.
ಇದನ್ನೂ ಓದಿ:ಮೈಸೂರು ದಸರಾ: ಗಜಪಡೆಯ ಪೂಜೆ ನೋಡಿ ಖುಷಿಯಾದ ಅಮೆರಿಕದ ಪ್ರವಾಸಿ