ಮೈಸೂರು: ಪ್ರವಾಸಿ ನಗರಿ ಮೈಸೂರಿನಿಂದ ತಿರುಪತಿಗೆ ನೇರ ವಿಮಾನಯಾನ ಹಾರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈ ಬಗ್ಗೆ ಇಂಡಿಗೋ ವಿಮಾನಯಾನ ಸಂಸ್ಥೆಯ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್ ಮಂಜುನಾಥ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ದೇಶದಲ್ಲೇ ಅತಿಹೆಚ್ಚು ಭಕ್ತಾದಿಗಳು ಭೇಟಿ ನೀಡುವ ತಿರುಪತಿಗೆ ಮೈಸೂರಿನಿಂದ ನೇರ ವಿಮಾನಯಾನ ಹಾರಾಟವನ್ನು ಆರಂಭಿಸುವ ಬಗ್ಗೆ ಚರ್ಚೆಗಳು ನಡೆದಿದ್ದು, ಇದರ ಜೊತೆಗೆ ಟಿಕೆಟ್ ದರ, ಟೂರ್ ಪ್ಯಾಕೇಜ್ ಬಗ್ಗೆ ಚರ್ಚೆ ನಡೆದಿದೆ. ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ದರ್ಶನಕ್ಕೆ ಆನ್ಲೈನ್ ಟಿಕೆಟ್ ವ್ಯವಸ್ಥೆ ಇರುವುದರಿಂದ ಟಿಕೆಟ್ ಬುಕ್ ಆಗಿ ಅಲ್ಲಿ ವಾಸ್ತವ್ಯಕ್ಕೂ ವ್ಯವಸ್ಥೆಯಾದ ನಂತರ ಭಕ್ತರು ತಿರುಪತಿಗೆ ಹೊರಡುತ್ತಾರೆ.
ಮೈಸೂರಿನಿಂದ ನಿತ್ಯ ಕೆಎಸ್ಆರ್ಟಿಸಿ ಬಸ್, ಕೆಎಸ್ಟಿಡಿಸಿ ಟೂರ್ ಪ್ಯಾಕೇಜ್ ಖಾಸಗಿ ಐಷಾರಾಮಿ ಬಸ್ಗಳ ವ್ಯವಸ್ಥೆ ಹಾಗೂ ನಿತ್ಯವೂ ಮೈಸೂರಿನಿಂದ ನೇರವಾಗಿ ರೈಲು ವ್ಯವಸ್ಥೆ ಇರುವುದರಿಂದ ವಿಮಾನಯಾನಕ್ಕೆ ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಎಂಬ ಸಮೀಕ್ಷೆ ನಡೆಸಿ, ತಿರುಪತಿಗೆ ಮೈಸೂರಿನಿಂದ ಇಂಡಿಗೋ ವಿಮಾನಯಾನ ಸೇವೆಯನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಇಂಡಿಗೋ ವಿಮಾನಯಾನ ಸಂಸ್ಥೆಯ ಜೊತೆ ಮಾತುಕತೆ ನಡೆಸಲಾಗಿದೆ. ತಿರುಪತಿಗೆ ವಿಮಾನಯಾನ ಸೇವೆ ಆರಂಭಿಸಿದ್ರೆ ಆನ್ಲೈನ್ ನಲ್ಲಿ ದರ್ಶನಕ್ಕೆ ಟಿಕೆಟ್ ಬುಕ್ ಮಾಡಿಕೊಂಡವರು ಕಡಿಮೆ ಅವಧಿಯಲ್ಲಿ ದೇವರ ದರ್ಶನ ಮಾಡಿಕೊಂಡು ಬರಲು ಸಾಧ್ಯವಾಗುತ್ತದೆ.