ಮೈಸೂರು :ಎಂಇಎಸ್ ಗಲಾಟೆಯ ಬಗ್ಗೆ ಚಕಾರವೆತ್ತದ ರಾಜ್ಯದ ಸಂಸದರನ್ನ ಬಹಿರಂಗವಾಗಿ ಹರಾಜು ಹಾಕುವ ಮೂಲಕ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟಿಸಿದರು.
ಇಂದು ಮೈಸೂರಿನ ಆರು ಗೇಟ್ ಬಳಿ ಪ್ರತಿಭಟನೆ ನಡೆಸಿದ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್, ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ತೋರುತ್ತಿದ್ದರು ರಾಜ್ಯದ ಸಂಸದರು ತಮಗೆ ಏನೂ ಗೊತ್ತಿಲ್ಲ ಎನ್ನುವಂತೆ ಕಿವುಡರ ರೀತಿ ವರ್ತಿಸುತ್ತಿದ್ದಾರೆ. ಆದ್ದರಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೌರವ ಕೊಟ್ಟು ಹರಾಜು ಹಾಕುವುದಿಲ್ಲ. ಉಳಿದ ಸಂಸದರನ್ನ ಬಹಿರಂಗವಾಗಿ ಹರಾಜು ಹಾಕುತ್ತೇವೆ ಎಂದರು.
ರಾಜ್ಯದ ಸಂಸದರನ್ನೆಲ್ಲ ಹರಾಜಿಗಿಟ್ಟ ವಾಟಾಳ್ ನಾಗರಾಜ್.. ಈ ಹರಾಜಿನಲ್ಲಿ ಸಂಸದ ಪ್ರತಾಪ್ ಸಿಂಹ, ತೇಜಸ್ವಿಸೂರ್ಯ, ಉಮೇಶ್ ಜಾಧವ್, ಶೋಭಾ ಕರಂದ್ಲಾಜೆ, ಪ್ರಲ್ಹಾದ್ ಜೋಶಿ, ಸದಾನಂದಗೌಡರು ಸೇರಿದಂತೆ 27 ಸಂಸದರನ್ನ ಯಾರು ಸಹ ಹರಾಜಿನಲ್ಲಿ ಕೊಂಡುಕೊಳ್ಳಲಿಲ್ಲ. ಆದರೆ, ಸಂಸದೆ ಸುಮಲತಾ ಅಂಬರೀಶ್ ಅವರನ್ನ ಕಾಲೇಜು ವಿದ್ಯಾರ್ಥಿ ಒಬ್ಬ ಒಂದು ರೂಪಾಯಿಗೆ ಖರೀದಿಸಿದ.
ಇದೇ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ನಾವು ಈಗ ಗಂಭೀರ ಪರಿಸ್ಥಿತಿಯಲ್ಲಿದ್ದೇವೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್) ಪುಂಡರು ಗಲಾಟೆ ಮಾಡತ್ತಲೇ ಇದ್ದಾರೆ. ಇದು ಘೋರ ಅನ್ಯಾಯ. ಇದನ್ನ ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಎಂಇಎಸ್‌ನ ನಿಷೇಧ ಮಾಡಬೇಕು.
ನಿನ್ನೆ ಮತ್ತು ಇವತ್ತು ಸಮಯ ನೀಡಿದ್ದೆವು. ಇವತ್ತಿನ ಸಂಜೆಯೊಳಗೆ ಎಂಇಎಸ್ ನಿಷೇಧ ಮಾಡದಿದ್ದರೆ ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಎಲ್ಲಾ ಸಂಘಟನೆಗಳ ಸಭೆ ಕರೆಯಲಾಗಿದೆ. ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇವೆ. ಜೊತೆಗೆ ಕರ್ನಾಟಕ ಬಂದ್ ನಡೆಸುವ ಬಗ್ಗೆಯೂ ಸಹ ತೀರ್ಮಾನಿಸಲಾಗುವುದು ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.