ಮೈಸೂರು: ಕೇಂದ್ರ ಸರ್ಕಾರ ಯಾವ ರಾಜ್ಯದ ಮೇಲೂ ಹಿಂದಿ ಹೇರಿಕೆ ಮಾಡಬಾರದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟಿಸಿದರು. ಮೈಸೂರಿನಲ್ಲಿ ಹಾರ್ಡಿಂಗ್ ಬಳಿ ಪ್ರತಿಭಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಹಿಂದಿ ಸಂಪರ್ಕ ಭಾಷೆಯಾಗಿ ಬಳಸುವ ಬಗ್ಗೆ ಅಮಿಶ್ ಶಾ ಸೂಚನೆ ನೀಡಬಾರದು ಎಂದು ಕಿಡಿಕಾರಿದರು.
ಹಿಂದಿ ಹೇರಿಕೆ ಮಾಡಿದ್ರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಲಾಗುವುದು. ಕೇಂದ್ರದಿಂದ ಪ್ರಾದೇಶಿಕ ಭಾಷೆಗಳನ್ನು ತುಳಿಯುವ ಹುನ್ನಾರ ನಡೆಸಲಾಗುತ್ತಿದೆ. ಹಿಂದಿಯಿಂದಾಗಿ ಕರ್ನಾಟಕಕ್ಕೆ ಅಪಾಯ ಇದೆ. ಕೂಡಲೇ ರಾಜ್ಯ ಸರ್ಕಾರ ಹಿಂದಿಯನ್ನು ತಿರಸ್ಕರಿಸಬೇಕು. ಲೋಕಸಭಾ ಸದಸ್ಯರು ಹಿಂದಿಯನ್ನು ವಿರೋಧಿಸಬೇಕು. ಕರ್ನಾಟಕದಿಂದ ಹಿಂದಿಯನ್ನು ತೊಲಗಿಸಬೇಕು ಎಂದು ಒತ್ತಾಯಿಸಿದರು.