ಮೈಸೂರು :ಕಳೆದ 14 ವರ್ಷಗಳಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗೆ ಯಾವುದೇ ನೇಮಕಾತಿ ಮಾಡಿಲ್ಲ. ಈಗ 382 ಹುದ್ದೆಗಳು ಖಾಲಿ ಇವೆ. ಈ ಖಾಲಿ ಹುದ್ದೆಗಳಿಂದಲೇ ಮೈಸೂರು ವಿವಿಗೆ ನ್ಯಾಕ್ ಗ್ರೇಡ್ ಕಡಿಮೆಯಾಯಿತು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಮೈಸೂರು ವಿವಿಯಲ್ಲಿ 664 ಪ್ರೊಫೆಸರ್ ಹುದ್ದೆಗಳಲ್ಲಿ 382 ಹುದ್ದೆಗಳು ಖಾಲಿ ಇವೆ. ಈಗ ಹಾಲಿ 282 ಜನ ಕೆಲಸ ಮಾಡುತ್ತಿದ್ದಾರೆ. ಈ ವರ್ಷ 12 ಜನ ಪ್ರೊಫೆಸರ್ಗಳು ನಿವೃತ್ತರಾಗಲಿದ್ದಾರೆ. ಕಳೆದ 14 ವರ್ಷಗಳಿಂದ ವಿವಿಗೆ ಯಾವುದೇ ಹೊಸ ನೇಮಕಾತಿ ಮಾಡಿಲ್ಲ.
ಆದ್ದರಿಂದ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಖಾಲಿ ಹುದ್ದೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ನಿಯಮಾನುಸಾರ ಖಾಲಿ ಹುದ್ದೆ ಭರ್ತಿ ಮಾಡುವ ಆಶಾಭಾವನೆ ಇದೆ. ಕೆಲವೊಂದು ವಿಭಾಗಕ್ಕೆ ಒಬ್ಬ ಪ್ರೊಫೆಸರ್ ಇದ್ದು, ಸಂಸ್ಕೃತಕ್ಕೆ ಒಬ್ಬರೂ ಸಹ ಇಲ್ಲ. ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.