ಮೈಸೂರು :ಪ್ರವಾಸಿಗರಿಗೆ ದಸರಾ ನಂತರ ರತ್ನಖಚಿತ ಸಿಂಹಾಸನದ ದರ್ಶನ ಸಿಗುವುದಿಲ್ಲ. ಹೀಗಾಗಿ, ಯದುವಂಶದ ಸಿಂಹಾಸನ ನೋಡಬೇಕು ಎನ್ನುವ ಆಸೆ ಇಟ್ಟುಕೊಂಡವರಿಗೆ ಕೊಂಚ ನಿರಾಶೆಯಾಗಲಿದೆ.
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ದಸರಾ ನಂತರ ಈ ಬಾರಿಯೂ ಪ್ರವಾಸಿಗರಿಗೆ ಸಿಂಹಾಸನ ನೋಡಲು ಅವಕಾಶ ಇರುವುದಿಲ್ಲ. ಈ ಬಾರಿ ದಸರಾ ಸಂಪ್ರದಾಯವಾಗಿ ನಡೆಯಲಿದೆ. ಅರಮನೆ ಸಂಪ್ರದಾಯದ ಬಗ್ಗೆ ಅರಮನೆ ಕಚೇರಿ ಮಾಹಿತಿ ನೀಡಲಿದೆ ಎಂದರು.
ಈ ಬಾರಿಯೂ ಪ್ರವಾಸಿಗರಿಗೆ ಸಿಂಹಾಸನ ದರ್ಶನ ಇರುವುದಿಲ್ಲ.. ಅರಮನೆ ಆನೆಗಳನ್ನು ಗುಜರಾತ್‌ಗೆ ರವಾನಿಸುವ ಬಗ್ಗೆ ಪ್ರತಿಕ್ರಿಯೆ ನೀಡಿ, ಆನೆಗಳನ್ನು ಕಳುಹಿಸುವ ಬಗ್ಗೆ ಅರಮನೆ ಕಚೇರಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅಲ್ಲದೇ ಜಟ್ಟಿ ಕುಸ್ತಿ ನಡೆಸಬೇಕೇ ಅಥವಾ ಬೇಡವೇ ಎಂಬುವುದರ ಬಗ್ಗೆ ತಿಳಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ನಾಡಹಬ್ಬ ದಸರಾಕ್ಕೆ ಸಿದ್ಧತೆ: ಅಕ್ಟೋಬರ್ 1ಕ್ಕೆ ಚಿನ್ನದ ಸಿಂಹಾಸನ ಜೋಡಣೆ
ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಕೆಲ ದಿನಗಳಿಂದ ಪ್ರವಾಸಿಗರು ಮೈಸೂರಿಗೆ ಬರುತ್ತಿರುವುದರಿಂದ, ಹೋಟೆಲ್ ಉದ್ಯಮ ತಕ್ಕ ಮಟ್ಟಿಗೆ ಚೇತರಿಕೆಯಾಗುತ್ತಿದೆ ಎಂದು ಹೇಳಿದರು.
ನಂತರ ಮೈಸೂರು ಟ್ರಾವೆಲ್ ಅಸೋಸಿಯೇಷನ್ ಅಧ್ಯಕ್ಷ ಮಾತನಾಡಿ, ಜಂಬೂಸವಾರಿ ಮೆರವಣಿಗೆಯನ್ನ ಬನ್ನಿಮಂಟಪದ ಕೊನೆಯವರೆಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕಂದ್ರೆ ದಸರಾ ಚೆನ್ನಾಗಿ ಮಾಡಬೇಕು.
ಮೈಸೂರು ಪ್ರವಾಸೋದ್ಯಮವನ್ನೇ ನಂಬಿಕೊಂಡಿದೆ. ಹೀಗಾಗಿ, ಅರಮೆನೆಗೆ ಮಾತ್ರವೇ ಜಂಬೂಸವಾರಿ ಸೀಮಿತವಾಗದೇ ಪ್ರತಿವರ್ಷದಂತೆ ಬನ್ನಿಮಂಟಪದವರೆಗೂ ಸಾಗಬೇಕು. ಇದರಿಂದ ಅನೇಕರಿಗೆ ಅನುಕೂಲವಾಗಲಿದೆ ಎಂದರು.
ಪ್ರವಾಸಿಗರಿಗೆ ಹೂ ನೀಡಿದ ಯದುವೀರ್
ಪ್ರವಾಸೋದ್ಯಮ ಇಲಾಖೆ, ಮೈಸೂರು ಟ್ರಾವೆಲ್ ಅಸೋಸಿಯೇಷನ್ ಹಾಗೂ ಹೋಟೆಲ್ ಮಾಲೀಕರ ಸಂಘದಿಂದ ಏರ್ಪಡಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಯದುವೀರ್ ಅವರು ಪ್ರವಾಸಿಗರಿಗೆ ಹೂ ನೀಡಿ ಸ್ವಾಗತಿಸಿದರು.