ಮೈಸೂರು: ದಸರಾ ರಂಗು ಮುಗಿಯುತ್ತಿದ್ದಂತೆ ಹುಣಸೂರು ಉಪ ಚುನಾವಣೆ ಕಾವು ಜೋರಾಗಿದ್ದು, ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಉಪ ಚುನಾವಣೆಗೆ ಮೈತ್ರಿ ಬಿಟ್ಟು ಏಕಾಂಗಿಯಾಗಿ ಸ್ಪರ್ಧೆಗಿಳಿಯಲಿರುವ ಜೆಡಿಎಸ್ ರಣತಂತ್ರ ರೂಪಿಸುತ್ತಿದೆ.
ನಾಳೆ ಹುಣಸೂರಲ್ಲಿ ಜೆಡಿಎಸ್ ಸಭೆ: ಉಪ ಸಮರಕ್ಕೆ ಅಭ್ಯರ್ಥಿ ಘೋಷಣೆ ಮಾಡ್ತಾರಾ ದೇವೇಗೌಡ್ರು? - by-election
ದಸರಾ ರಂಗು ಮುಗಿಯುತ್ತಿದ್ದಂತೆ ಹುಣಸೂರು ಉಪ ಚುನಾವಣೆ ಕಾವು ಜೋರಾಗಿದ್ದು, ಹುಣಸೂರು-ಗದ್ದಿಗೆ ರಸ್ತೆಯಲ್ಲಿರುವ ಕೆಂಡಗಣೇಶ್ವರ ದೇವಾಲಯದ ಆವರಣದಲ್ಲಿ ನಾಳೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಬೃಹತ್ ಸಭೆ ನಡೆಯಲಿದೆ.

ಹೌದು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಹುಣಸೂರು ವಿಧಾನಸಭಾ ಕ್ಷೇತ್ರದ ಅಂದಿನ ಶಾಸಕರಾಗಿದ್ದ ಹೆಚ್.ವಿಶ್ವನಾಥ್ ಅವರ ನಿರ್ಣಯವೇ ಕಾರಣವೆಂದು ಭಾವಿಸಿರುವ ಜೆಡಿಎಸ್ ಪಕ್ಷದ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಹುಣಸೂರು ಕ್ಷೇತ್ರದಲ್ಲಿ ಉಪ ಚುನಾವಣೆ ಗೆದ್ದು ತೋರಿಸಬೇಕೆಂದು ಪಣ ತೊಟ್ಟಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹುಣಸೂರು-ಗದ್ದಿಗೆ ರಸ್ತೆಯಲ್ಲಿರುವ ಕೆಂಡಗಣೇಶ್ವರ ದೇವಾಲಯದ ಆವರಣದಲ್ಲಿ ನಾಳೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಸಭೆ ನಡೆಸಿ, ಅಭ್ಯರ್ಥಿಯನ್ನು ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಳೆ ಹೆಚ್.ಡಿ.ದೇವೇಗೌಡ, ಹೆಚ್.ಡಿ.ಕುಮಾರಸ್ವಾಮಿ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಸೇರಿದಂತೆ ಪಕ್ಷದ ಅನೇಕ ಮುಖಂಡರು ಸಭೆಗೆ ಭಾಗಿಯಾಗಲಿರುವ ಹಿನ್ನೆಲೆ ಟಿಕೆಟ್ ಘೋಷಣೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಕುಟುಂಬದವರಿಗೆ ಮಣೆ ಹಾಕುವುದಿಲ್ಲ. ಕಾರ್ಯಕರ್ತರಿಗೆ ಟಿಕೆಟ್ ನೀಡುವುದಾಗಿ ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದು, ಯಾರಿಗೆ ಟಿಕೆಟ್ ಸಿಗಬಹುದು ಎಂಬ ಕುತೂಹಲ ಕಾರ್ಯಕರ್ತರಲ್ಲಿ ಮನೆ ಮಾಡಿದೆ.