ಮೈಸೂರು :ನಾಲ್ವರನ್ನು ಬಲಿ ಪಡೆದ ಹುಲಿಯನ್ನು ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ಆ ಹುಲಿಗೆ ಮೈಸೂರು ಮೃಗಾಲಯದ ವ್ಯಾಪ್ತಿಯ ಕೂರ್ಗಳ್ಳಿಯಲ್ಲಿರುವ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಗಡಿ ಭಾಗದ ಮದುಮಲೈ ಹಾಗೂ ಪಂದನೂರು ಅರಣ್ಯ ವ್ಯಾಪ್ತಿ ಪ್ರದೇಶದಲ್ಲಿ ನಾಲ್ಕು ಜನರನ್ನು ಬಲಿ ಪಡೆದು, 30ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದರು.
ಸೆರೆ ಸಿಕ್ಕ ಹುಲಿ ಚಿಕಿತ್ಸೆಗಾಗಿ ಮೈಸೂರು ಮೃಗಾಲಯಕ್ಕೆ
ಸತತ 21 ದಿನಗಳ ಹುಲಿ ಕಾರ್ಯಾಚರಣೆ ನಂತರ ನಿನ್ನೆ (ಶುಕ್ರವಾರ) ಸಂಜೆ ಮದುಮಲೈ ವ್ಯಾಪ್ತಿಯ ಮಸಿನಗುಡಿ ಭಾಗದಲ್ಲಿ ಹುಲಿ ಇರುವುದು ಪತ್ತೆಯಾಗಿದೆ. ಎರಡು ಆನೆಗಳ ಸಹಾಯದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.