ಮೈಸೂರು: ಚಾಮರಾಜನಗರಕ್ಕೆ ಹೋಗದೇ ಇದ್ದವರಿಗೆ ಅಧಿಕಾರ ಶಾಶ್ವತವಾಗಿ ಉಳಿದಿದೆಯೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಗೆ ಹೋಗುವುದರಿಂದ ನನಗೆ ಬೇರೆಯವರ ರೀತಿ ಯಾವುದೇ ಭಯ ಇಲ್ಲ. ಇದು ನಂಬಿಕೆ ಅಪನಂಬಿಕೆ ಪ್ರಶ್ನೆ ಅಲ್ಲ. ಇದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯದ ಪ್ರಶ್ನೆ. ಆ ಕರ್ತವ್ಯವನ್ನು ನಾನು ಈಗ ಮಾಡುತ್ತಿದ್ದೇನೆ ಎಂದರು.
ನಾಳೆ ಚಾಮರಾಜನಗರಕ್ಕೆ ಸಿಎಂ ಬೊಮ್ಮಾಯಿ
ನಾಳೆ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ, ನಾಳೆ ಮಾತ್ರ ಅಲ್ಲ, ಇನ್ನೂ ಹಲವು ಬಾರಿಯೂ ನಾನು ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ. ಸಿಎಂಗೆ ಎಲ್ಲ ಜಿಲ್ಲೆಗಳೂ ಒಂದೇ. ಅಲ್ಲಿ ಹೋದ್ರೆ ಅಧಿಕಾರ ಹೋಗುತ್ತದೆ ಎಂಬುದು ಸರಿಯಲ್ಲ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿ ವಿಚಾರವಾಗಿ ಮಾತನಾಡಿದ ಸಿಎಂ, ರಸ್ತೆಗಳ ಕಳಪೆ ಬಗ್ಗೆ ವರದಿ ತಯಾರಿಕೆಗೆ ಟಾಸ್ಕ್ ಪೋರ್ಸ್ ರಚನೆ ಮಾಡಿದ್ದೇನೆ. ಯಾವ ಅವಧಿಯಲ್ಲಿ ರಸ್ತೆ ಆಗಿದೆ. ರಸ್ತೆ ಗುಣಮಟ್ಟದಿಂದ ಮಾಡಲಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಕಳಪೆ ಕಾಮಗಾರಿಯಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಗುತ್ತಿಗೆದಾರನ ಮೇಲೆ ಕ್ರಮ ನಿಶ್ಚಿತ ಎಂದು ಎಚ್ಚರಿಕೆ ನೀಡಿದರು.
ಮಳೆ ಬಂದಾಗ ಮಾತ್ರ ಈ ವಿಚಾರ ಚರ್ಚೆ ಮಾಡಿ ನಂತರ ಸುಮ್ಮನಾಗುವುದಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮಳೆ ಬಂದಾಗ ನಿರಂತರ ನೀರು ತುಂಬುವ ಪ್ರದೇಶ ಗುರುತು ಮಾಡಿ, ಅದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಚಾಮರಾಜನಗರ ಆಸ್ಪತ್ರೆ ಉದ್ಘಾಟನೆಯಲ್ಲಿ ಅಂದು ಅಪ್ಪ ಇಂದು ಮಗ.. ಸಿದ್ದು - ಬೊಮ್ಮಾಯಿ ಭೇಟಿ ದಿನವೂ ಒಂದೇ