ಮೈಸೂರು:ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಸಂಬಂಧಿಸಿದ ದೂರುಗಳನ್ನು ಇನ್ನು ಮುಂದೆ ತಂತ್ರಜ್ಞಾನ ಬಳಸಿಕೊಂಡು ತನಿಖೆ ನಡೆಸಲಾಗುವುದು. ಯಾವುದೇ ಮುಖಾಮುಖಿ ವಿಚಾರಣೆ ಅಗತ್ಯ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ವಿಜಯದಶಮಿ ದಿನವೇ ಚಾಲನೆ ದೊರೆಯಲಿದೆ. ಆದಾಯ ತೆರಿಗೆ ಇಲಾಖೆಯನ್ನು ಮತ್ತಷ್ಟು ಬಲಗೊಳಿಸುವ ಮತ್ತು ಕೆಲ ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಇದಕ್ಕೆ ಸಾಕಷ್ಟು ಮನವಿಗಳು ಬರುತ್ತಿರುವ ಕಾರಣ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಜಿಎಸ್‌ಟಿ ಹಾಗೂ ಇತರೆ ತೆರಿಗೆ ವಿಚಾರವಾಗಿ ಗುಜರಾತ್, ವಾರಣಾಸಿ ನಂತರ 3ನೇ ಸಭೆಯನ್ನು ಮೈಸೂರಿನಲ್ಲಿ ನಡೆಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ಇದರಿಂದ ಸಿಬ್ಬಂದಿ ಹಾಗೂ ತೆರಿಗೆದಾರರು ಒತ್ತಡ ರಹಿತವಾಗಿ ಕೆಲಸ ನಿರ್ವಹಿಸಲು ಅನುಕೂಲವಾಗಲಿದೆ. ಅಲ್ಲದೆ, ತೆರಿಗೆ ಸಂಗ್ರಹದ ವಾರ್ಷಿಕ ಗುರಿಗೂ ತೊಂದರೆ ಇಲ್ಲ ಎಂದು ವಿವರಿಸಿದರು.