ಮೈಸೂರು:ದಸರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿರುವ ದಸರಾ ಕ್ರೀಡಾಕೂಟಕ್ಕೆ ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದು, ಅಕ್ಟೋಬರ್ 1ರಂದು ಸಂಜೆ 4.30ಕ್ಕೆ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಉದ್ಘಾಟಿಸಲಿದ್ದಾರೆ ಎಂದು ದಸರಾ ಕ್ರೀಡಾ ಉಪಸಮಿತಿ ಅಧ್ಯಕ್ಷ ಎಂ.ಬಿ ಜಗದೀಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.29ರಿಂದ ಅಕ್ಟೋಬರ್ 6ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ 30ಕ್ಕೂ ಅಧಿಕ ಕ್ರೀಡೆಗಳು ನಡೆಯಲಿವೆ. ಇದರಲ್ಲಿ 6 ಸಾವಿರ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಕ್ರೀಡಾಪಟುಗಳಿಗೆ ವಸತಿ ಗೃಹ, ಹೋಟೆಲ್‍ಗಳಲ್ಲಿ ವಸತಿ ವ್ಯವಸ್ಥೆ, ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಊಟೋಪಹಾರ ವ್ಯವಸ್ಥೆ, ಸಾರಿಗೆ ವ್ಯವಸ್ಥೆ, ಕ್ರೀಡಾ ಸಮವಸ್ತ್ರ ಒದಗಿಸಲಾಗುವುದು. ನಾಳೆ ಕೆಆರ್ಎಸ್ ಹಿನ್ನೀರು ಬಳಿ ನಡೆಯಲಿರುವ ಸಾಹಸ ಕ್ರೀಡೆಗಳಿಗೆ ( ಮಧ್ಯಾಹ್ನ 12.30) ಸಚಿವ ವಿ.ಸೋಮಣ್ಣ, ಕುಪ್ಪಣ್ಣ ಪಾರ್ಕ್ ಬಳಿ ಜರುಗುವ ಸದೃಢ ಭಾರತ ಮತ್ತು ಮಕ್ಕಳ ಕ್ರೀಡಾರಂಗ (ಸಂಜೆ 4.45) ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.
ಅಕ್ಟೋಬರ್ 2ರಂದು ಸೈಕ್ಲೋಥಾನ್ ಸ್ಪರ್ಧೆ (ಪುರುಷರಿಗೆ 100 ಕಿ.ಮೀ, ಮಹಿಳೆಯರಿಗೆ 50 ಕಿ.ಮೀ.) ನಡೆಯಲಿದೆ. ಬನ್ನೂರು ಜಂಕ್ಷನ್‍ನಿಂದ ಪ್ರಾರಂಭವಾಗಿ ರಿಂಗ್ ರಸ್ತೆ, ಗರ್ಗೇಶ್ವರಿ, ಟಿ.ನರಸೀಪುರ, ಲಲಿತಾದ್ರಿಪುರ, ಜೆಎಸ್ಎಸ್ ಪ್ರಕೃತಿ ಚಿಕಿತ್ಸಾಲಯ ಮೂಲಕ ಚಾಮುಂಡಿ ಬೆಟ್ಟದ ದೇವಿ ಕೆರೆಯಲ್ಲಿ ಮುಕ್ತಾಯಗೊಳ್ಳಲಿದೆ. ವಿಜೇತರಿಗೆ ಪ್ರಥಮ ₹ 30 ಸಾವಿರ, ದ್ವಿತೀಯ ₹ 25 ಸಾವಿರ, ತೃತೀಯ ₹ 20 ಸಾವಿರ, ನಾಲ್ಕನೇ ₹ 15 ಸಾವಿರ, ಐದನೇ ₹ 10 ಸಾವಿರ ಹಾಗೂ ಆರನೇ ವಿಜೇತರಿಗೆ ₹5 ಸಾವಿರ ಬಹುಮಾನ ನೀಡಲಾಗುತ್ತದೆ.
ಎಲ್ಲೆಲ್ಲಿ ಕ್ರೀಡೆಗಳು ಜರುಗಲಿವೆ?:ಚಾಮುಂಡಿ ವಿಹಾರ ಕ್ರೀಡಾಂಗಣ, ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ ಒಳಾಂಗಣ, ಕ್ರೀಡಾಂಗಣ, ಮಹಾರಾಜ ಕಾಲೇಜು, ಯುವರಾಜ ಕಾಲೇಜು ಒಳಾಂಗಣ ಕ್ರೀಡಾಂಗಣ, ಮೈಸೂರು ಟೆನ್ನಿಸ್ ಕ್ಲಬ್, ಚಾಮರಾಜಪುರಂ, ಎನ್.ಐ.ಇ. ಇಂಜಿನಿಯರಿಂಗ್ ಕಾಲೇಜು, ಜೆ.ಸಿ.ಇ. ಇಂಜಿನಿಯರಿಂಗ್ ಒಳಾಂಗಣ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗಿದೆ.
ಸೆ.30ರಿಂದ ಅ.6ರವರಗೆ ಮಹಾರಾಜ ಓವಲ್ ಮೈದಾನದಲ್ಲಿ ಯೋಗಾಸ್ಫರ್ಧೆ ನಡೆಯಲಿದ್ದು, ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಲಿದ್ದಾರೆ. 1800 ಯೋಗಾಪಟುಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಎಂದು ಯೋಗ ದಸರಾ ಉಪಸಮಿತಿ ಅಧ್ಯಕ್ಷ ಅನಿಲ್ ಥಾಮಸ್ ಹೇಳಿದರು.
ಅಕ್ಟೋಬರ್ 2ರಂದು ಮೈಸೂರು ಅರಮನೆಯ ಆವರಣದಲ್ಲಿ ಸರ್ವಧರ್ಮ ಗುರುಗಳ ಸಮಕ್ಷಮದಲ್ಲಿ ಯೋಗ ಸ್ಫರ್ಧೆ ಇರಲಿದೆ. ಅ.3ರಂದು ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಡೆಯುವ ಸ್ಫರ್ಧೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಭಾಗಿ, ಅ.4ರಂದು ಅರಮನೆ ಆವರಣದಲ್ಲಿ ಯೋಗ ಸರಪಳಿ ಕಾರ್ಯಕ್ರಮ ಜರುಗಲಿದೆ. ನಗರದ ಸ್ಪಚ್ಛತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಪೌರಕಾರ್ಮಿಕರಿಗಾಗಿ ಅ.5ರಂದು ಕುವೆಂಪು ನಗರದಲ್ಲಿ ಸ್ವಚ್ಛಸರ್ವೇಕ್ಷಣಾ ಯೋಗ ನಡೆಯಲಿದೆ. ಅ.6ರಂದು ಯೋಗ ಚಾರಣ ಮತ್ತು ದುರ್ಗಾ ನಮಸ್ಕಾರ ಯೋಗ ಕಾರ್ಯಕ್ರಮ ನಡೆಯಲಿದೆ ಎಂದರು.