ಮೈಸೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಯಾವುದೇ ರಾಜಕಾರಣಿ ಅಥವಾ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಕ್ರಮ ಕೈಗೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಹಗರಣದಲ್ಲಿ ಬಿ.ವೈ.ವಿಜಯೇಂದ್ರ ಹೆಸರು ಕೇಳಿ ಬರುತ್ತಿದೆಯಲ್ಲಾ? ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಸಿಎಂಗೆ ಸಹದ್ಯೋಗಿಗಳ ಸಹಕಾರ ಸಿಗುತ್ತಿಲ್ಲ. ಅವರು ಉಳಿದ ಅವಧಿಯಲ್ಲಿ ಆಡಳಿತಕ್ಕೆ ವೇಗ ತರಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ವೇಗಕ್ಕೆ ಸಂಪುಟ ಸಹದ್ಯೋಗಿಗಳು ಕೈಜೋಡಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಸಂಪುಟ ವಿಸ್ತರಣೆ, ಪುನರ್‌ರಚನೆ ಆಗುವುದು ಅನುಮಾನ. ನೇರವಾಗಿ ಚುನಾವಣೆಗೆ ಹೋಗಬಹುದು ಎಂದು ವಿಶ್ವನಾಥ್ ಹೇಳಿದರು.
ಸಿದ್ದರಾಮೋತ್ಸವ ವ್ಯಕ್ತಿ ಪೂಜೆ ಆಗಬಾರದು:ಸಿದ್ದರಾಮೋತ್ಸವ ಕಾರ್ಯಕರ್ತರ ಉತ್ಸವವಾಗಿರಬೇಕು. ಇಲ್ಲಿ ವ್ಯಕ್ತಿ ಪೂಜೆಯ ಉತ್ಸವ ಆಗಿರಬಾರದು. ಯಾವುದೇ ಉತ್ಸವ ಆದರೂ ಪಕ್ಷದ ಚೌಕಟ್ಟಿನಲ್ಲಿ ಪಕ್ಷದ ಉತ್ಸವ ಆಗಬೇಕು, ಅದು ಕಾರ್ಯಕರ್ತರಿಗೆ ಇಷ್ಟವಾಗುವಂತಿರಬೇಕು. ನಾನು ಬಹಳ ವರ್ಷ ಕಾಂಗ್ರೆಸ್ನಲ್ಲಿದ್ದೆ. ಕಾಂಗ್ರೆಸ್ ಇತಿಹಾಸದಲ್ಲಿ ಇಂತಹ ವ್ಯಕ್ತಿ ಉತ್ಸವವನ್ನು ನೋಡಿಲ್ಲ. ಈ ಬಗ್ಗೆ ಪ್ರಾರಂಭದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದರು, ಆದರೆ ಅನಂತರ ಅವರೂ ಸುಮ್ಮನಾದರು ಎಂದರು.
ಲೋಕಾಯುಕ್ತ ಬಲಪಡಿಸಿ:ಮೂಲ ಸ್ವರೂಪದ ಲೋಕಾಯುಕ್ತವನ್ನು ಬಲಪಡಿಸಬೇಕಿದ್ದು, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರಿಗೆ ಇಷ್ಟ ಇಲ್ಲ. ಅವರಿಗೆ ಲೋಕಾಯುಕ್ತದ ಬಗ್ಗೆ ಭಯ ಇದೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರೊಬ್ಬರು ಹೇಳಿದ ಮಾತಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ:ವಿಧಾನಸಭೆಯ ಪೂರ್ಣಾವಧಿ ಕಾರ್ಯದರ್ಶಿಯಾಗಿ ಮುಂಬಡ್ತಿ ಪಡೆದ ಎಂ.ಕೆ.ವಿಶಾಲಾಕ್ಷಿ