ಮೈಸೂರು: ದಿವಂಗತ ಪುನೀತ್ ರಾಜ್‍ಕುಮಾರ್ ಅವರ ಜೇಮ್ಸ್ ಚಿತ್ರದ ಪ್ರದರ್ಶನವನ್ನು ಒತ್ತಾಯಪೂರ್ವಕವಾಗಿ ಕಡಿತ ಮಾಡುವುದು ತಪ್ಪು. ಹಾಗೆ ಮಾಡಿದರೆ ಅದು ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು ಅಪ್ಪು ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಡಾ. ರಾಜ್ ಕುಟುಂಬ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಕುಟುಂಬ ಎಂದು ಹೇಳಿದರು.
ಜೇಮ್ಸ್ ಚಿತ್ರದ ಪ್ರದರ್ಶನ ಕಡಿತ ಮಾಡುವುದು ತಪ್ಪು ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.. ಡಾ. ರಾಜ್‍ಕುಮಾರ್ ಕುಟುಂಬದ ಕೊನೆಯ ಕುಡಿ ಪುನೀತ್ ಅವರ ಜೇಮ್ಸ್ ಚಿತ್ರದ ಪ್ರದರ್ಶನವನ್ನು ಒತ್ತಾಯಪೂರ್ವಕವಾಗಿ ಕಡಿತಗೊಳಿಸುವುದು ತಪ್ಪು. ಈ ರೀತಿ ಮಾಡಿದರೆ ಇದರ ವಿರುದ್ಧ ಜನ ರೊಚ್ಚಿಗೇಳುತ್ತಾರೆ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡುವವರು ನೋಡಲಿ. ಅದಕ್ಕೆ ಯಾವುದೇ ಅಡ್ಡಿ ಇಲ್ಲ. ಅದರೆ ಇನ್ನೊಂದು ಭಾಷೆಯ ಚಿತ್ರಕ್ಕಾಗಿ ಕನ್ನಡ ಸಿನಿಮಾ ಪ್ರದರ್ಶನದ ಸಂಖ್ಯೆ ಕಡಿಮೆ ಮಾಡುವುದು ಸರಿಯಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.
ಜಾತ್ರೆಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ ಸರಿಯಲ್ಲ:ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡದೆ ಇರುವುದು ಇದೊಂದು ಅಮಾನವೀಯ ನಡೆ. ಮುಸ್ಲಿಮರು ಈ ದೇಶದ ಪ್ರಜೆಗಳು, ಅವರನ್ನು ಅಲ್ಲಿ ವ್ಯಾಪಾರಕ್ಕೆ ಬರಬೇಡಿ, ಇಲ್ಲಿ ವ್ಯಾಪಾರಕ್ಕೆ ಬರಬೇಡಿ ಎಂದು ಹೇಳುವುದು ಸಂವಿಧಾನ ವಿರೋಧಿ ನಿಲುವು. ರಾಜ್ಯ ಸರ್ಕಾರ ತಕ್ಷಣ ಮುಸ್ಲಿಂ ವರ್ತಕರ ನೆರವಿಗೆ ಬರಬೇಕು. ಇಂತಹ ಬಹಿಷ್ಕಾರಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ನಡೆಯಬೇಕಿತ್ತು. ಈಗ ಬೋರ್ಡ್ ಮೀಟಿಂಗ್ ನಲ್ಲಿ ಕ್ಷೌರ ವೃತ್ತಿಯಲ್ಲಿ ಸಾಧನೆ ಮಾಡಿದ ಮುತ್ತುರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಮನವಿ ಮಾಡಿದ್ದೇನೆ. ಮುತ್ತುರಾಜ್ ಅವರು ೧ ಲಕ್ಷಕ್ಕೂ ಹೆಚ್ಚು ಜನರಿಗೆ ಕ್ಷೌರವನ್ನು ಮಾಡಿದ್ದು, ಅವರು ಜೈಲಿಗೆ ಹೋಗಿ ಕೈದಿಗಳಿಗೆ, ಭಿಕ್ಷುಕರಿಗೆ ಕ್ಷೌರ ಮಾಡಿದ್ದಾರೆ. ಅವರು ಕ್ಷೌರಿಕ ವೃತ್ತಿಯಲ್ಲಿ ಕ್ರಾಂತಿಯನ್ನು ಮಾಡಿದ್ದು, ಅವರಿಗೆ ಡಾಕ್ಟರೇಟ್ ನೀಡಲು ಮನವಿ ಮಾಡಿದ್ದೇನೆ ಎಂದು ಹೆಚ್ ವಿಶ್ವನಾಥ್ ಹೇಳಿದರು.
ಓದಿ :ಟಾಟಾ ಬೈ ಬೈ ಟು ಮಾಸ್ಕ್.. ಮುಂಬೈನಲ್ಲಿ ಮುಖಗವಸು ಕಡ್ಡಾಯ ನಿಯಮ ಶೀಘ್ರವೇ ರದ್ದು!