ಮೈಸೂರು:ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಂಜನಗೂಡಿನ ಶ್ರೀ ಕಂಠೇಶ್ವರ ದೇವಸ್ಥಾನ ಬಂದ್ ಆಗಿದ್ದು, ಭಕ್ತರಿಗೆ ದೇವಾಲಯದ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಕೊರೊನಾಗೆ ಬೆಚ್ಚಿದ ಶ್ರೀಕಂಠೇಶ್ವರ... 31ರವರೆಗೆ ಮುಚ್ಚಿದ ದಕ್ಷಿಣ ಕಾಶಿ ದ್ವಾರ - ನಂಜನಗೂಡಿನಲ್ಲಿ ದೊಡ್ಡಜಾತ್ರೆ ಮಹೋತ್ಸವ
ಕೊರೊನಾ ವೈರಸ್ ಶ್ರೀಕಂಠೇಶ್ವರನನ್ನು ಕಾಡಿದ್ದು, ಈ ತಿಂಗಳ 31ರವರೆಗೂ ದಕ್ಷಿಣ ಕಾಶಿಗೆ ಭಕ್ತರು ಬಾರದಂತೆ ಪ್ರವೇಶ ರದ್ದು ಮಾಡಲಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಿದ್ದು, ಸಾಮಾನ್ಯವಾಗಿ ದೇವಸ್ಥಾನಗಳಿಗೆ ಜನರು ಬರುವ ಕಾರಣ ಆ ಸಂದರ್ಭದಲ್ಲಿ ಸೋಂಕು ಹರಡಬಹುದು ಎಂಬ ಕಾರಣಕ್ಕೆ ಜಿಲ್ಲಾಡಳಿತ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಲ್ಲದೆ ನಂಜನಗೂಡಿನಲ್ಲಿ ದೊಡ್ಡಜಾತ್ರೆ ಮಹೋತ್ಸವ ಇದ್ದ ಕಾರಣ ಜಾತ್ರೆ ನಡೆಯುವುದು ಸಹ ಅನುಮಾನವಾಗಿದೆ. ಈ ತಿಂಗಳಿನಿಂದಲೇ ಜಾತ್ರೆಗೆ ಸಂಬಂಧಪಟ್ಟ ದೇವತಾ ಕಾರ್ಯ ಆರಂಭವಾಗಬೇಕಿತ್ತು ಆದರೆ ವೈರಸ್ ಭೀತಿಯಿಂದ ಎಲ್ಲಾ ಪೂಜಾ ಕಾರ್ಯಗಳು ಸ್ಥಗಿತಗೊಂಡಿದೆ.
ಇಂದಿನಿಂದ ಮಾರ್ಚ್ 31ರ ವರೆಗೆ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದ್ದು , ದೇವಾಲಯದಲ್ಲಿ ಪ್ರತಿದಿನದ ಪೂಜಾ ಕಾರ್ಯ ಎಂದಿನಂತೆ ನಡೆಯಲಿವೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.