ಮೈಸೂರು:ಒಂದನೇ ತರಗತಿ ವಿದ್ಯಾರ್ಥಿನಿ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆಯಲು ಜಾಗೃತಿ ಮೂಡಿಸಿರುವ ವಿಡಿಯೋ ಈಗ ದೇಶ-ವಿದೇಶಗಳಲ್ಲಿಯೂ ಮೆಚ್ಚುಗೆ ಪಡೆದಿದೆ. ಕೋವ್ಯಾಕ್ಸಿನ್ ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಸಹ ಈ ಪುಟಾಣಿಯ ಸಂದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ನವೆಂಬರ್ 14ರ ಮಕ್ಕಳ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ 6 ವರ್ಷದ ಬಾಲಕಿ ಕೋವ್ಯಾಕ್ಸಿನ್ ಲಸಿಕೆಯ ವೇಷ ಧರಿಸಿ ಅದರ ಮಹತ್ವ ಸಾರಿದ್ದಾಳೆ. ಮೈಸೂರಿನ ವಿಘ್ನೇಶ್ ಹಾಗೂ ಅಶ್ವಿನಿ ದಂಪತಿಯ ಪುತ್ರಿ ಎಂ.ವಿ.ಧಾತ್ರಿ ವಿದ್ಯಾವರ್ಧಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದು, ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯಂತೆ ವೇಷ ಧರಿಸಿ, ಎಲ್ಲರ ಗಮನ ಸೆಳೆದಿದ್ದಾಳೆ.
ರಂಗಾಯಣದ ರಂಗಕರ್ಮಿ ದ್ವಾರಕನಾಥ್ ಅವರು ಧಾತ್ರಿಗೆ ಕೋವ್ಯಾಕ್ಸಿನ್ ಮೇಕಪ್ ಮಾಡಿದ್ದು, ಧಾತ್ರಿಯ ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಧಾತ್ರಿ ವಿಡಿಯೋಗೆ ದೇಶ ವಿದೇಶಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.
ಈ ವಿಡಿಯೋದಲ್ಲಿ ಧಾತ್ರಿ, "ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿ ಪಡಿಸಿದ್ದು, ಇದು ಭಾರತದ ಮೊದಲ ದೇಶೀಯ ಲಸಿಕೆಯಾಗಿದೆ. ಲಸಿಕೆಯ ರಿಸರ್ಚ್ ಹೆಸರು ಬಿಬಿಬಿ-152 ಆಗಿದ್ದು, ಲಸಿಕೆ ಶೇ.77.8 ರಷ್ಟು ಸಮರ್ಥವಾಗಿದೆ. ಲಸಿಕೆಯನ್ನು 2 ಡೋಸ್ ಪಡೆಯಬೇಕು" ಎಂದು ಹೇಳಿದ್ದಾಳೆ. ಅಲ್ಲದೇ ಪ್ರಧಾನ ಮಂತ್ರಿಗಳು, ವೈದ್ಯರು, ನರ್ಸ್ಗಳು ಹಾಗೂ ಎಲ್ಲಾ ಕೋವಿಡ್ ವಾರಿಯರ್ಸ್ಗೆ ಧನ್ಯವಾದ ತಿಳಿಸಿದ್ದಾಳೆ.
ಇದನ್ನೂಓದಿ:ಮೇಕೆದಾಟು ವಿಚಾರಕ್ಕಾಗಿ ಪಾದಯಾತ್ರೆ ಮಾಡ್ತಿವಿ: ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ