ಮೈಸೂರು: ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ಯಾವುದಕ್ಕೂ ಆದ್ಯತೆ ನೀಡಿಲ್ಲ. ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ. ಇದೊಂದು ಸಬ್ ಕಾ ವಿನಾಶ್ ಬಜೆಟ್ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಬಜೆಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಹೆಚ್ ಡಿ ಕೋಟೆ ಜಂಗಲ್ ಲಾಡ್ಜ್ ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಮಂಡನೆಯಾದ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಆದ್ದರಿಂದ ನಿರಾಶೆಯಾಗಿಲ್ಲ. ಆದರೆ ಮಹಿಳೆಯರು, ರೈತರು ಹಾಗೂ ಮಧ್ಯಮ ವರ್ಗದವರು ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ನಿರೀಕ್ಷೆ ಹುಸಿಯಾಗಿದೆ ಎಂದರು.
ಈ ವರ್ಷ 39.45 ಲಕ್ಷ ಕೋಟಿ ಬಜೆಟ್ ಮಂಡಿಸಲಾಗಿದೆ. ಇದರಲ್ಲಿ ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ಉತ್ತೇಜನಕಾರಿ ಕಾರ್ಯಕ್ರಮಗಳನ್ನ ಘೋಷಣೆಯಾಗಿಲ್ಲ. ಮೋದಿಯವರು 8 ವರ್ಷದ ಅವಧಿಯಲ್ಲಿ 93 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಅದಕ್ಕೆ 9.40 ಲಕ್ಷ ಕೋಟಿ ರೂ. ಬಡ್ಡಿ ಕಟ್ಟಬೇಕು. ದೇಶವನ್ನ ಸಾಲದ ಸುಳಿಯಲ್ಲಿ ಸಿಲುಕಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.