ಮೈಸೂರು :ಅನ್ನದಾತರನ್ನು ಭಯೋತ್ಪಾದಕರು ಎನ್ನುವ ನಿಮಗೆ ನೈತಿಕತೆ ಇದೆಯಾ? ಈ ಕೂಡಲೇ ನೀವು ರಾಜೀನಾಮೆ ನೀಡಬೇಕು. ನೀವು ಸಂಸದರಾಗಲು ನಾಲಾಯಕ್ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರ್ ನಾಥ್ ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋದ್ಪಾದಕರು ಬಂದ್ನಲ್ಲಿ ಭಾಗವಹಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅನ್ನದಾತರ ನೋವು ಏನು ಅಂತಾ ಅವರಿಗೆ ಗೊತ್ತಾ? 25 ಮಂದಿ ಸಂಸದರು ಎಲ್ಲಿದ್ದೀರಾ? ರೈತರ ಪರವಾಗಿ ಧ್ವನಿ ಎತ್ತಿದ್ದೀರಾ? ಎಂದು ಕುಟುಕಿದರು.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಡಾ.ಪುಷ್ಪ ಅಮರ್ ನಾಥ್ ಗ್ಯಾಸ್ ಬೆಲೆ 50ರೂ. ಹೆಚ್ಚಳವಾಗಿದೆ ಇನ್ನುಮುಂದೆ ಸಬ್ಸಿಡಿ ಇಲ್ಲ. ಇನ್ನು ಎಷ್ಟು ದಿನ ಕಣ್ಣು ಒರೆಸುವ ತಂತ್ರ ಮಾಡ್ತೀರಾ. ಪೆಟ್ರೋಲ್, ಡೀಸೆಲ್ ಬೆಲೆ 40 ರೂ. ಇದ್ದಾಗ ಪ್ರತಿಭಟಿನೆ ಮಾಡಿದ್ದವರು, ಈಗ ಏನು ಮಾಡ್ತಿದ್ದೀರಾ? ಎಂದು ಪ್ರಶ್ನಿಸಿದರು.‘
ಬಂದ್ ವಿಫಲ ಎಂಬ ಸಿಎಂ ಹೇಳಿಕೆ ಅಮಾನುಷವಾಗಿದೆ. ರೈತರ ಹೆಸರಿನಲ್ಲಿ ಅಧಿಕಾರ ಹಿಡಿದ ಬಿಎಸ್ವೈ ಅವರ ನೇತೃತ್ವದ ಸರ್ಕಾರದಿಂದ ಇಂತಹ ಹೇಳಿಕೆ ಅಮಾನವೀಯ. ಬಂದ್ ಮಾಡಿದ ಮೇಲೆ ಚರ್ಚೆಗೆ ಬನ್ನಿ ಎನ್ನುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.
ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವರು ಹೇಳುತ್ತಾರೆ. ರೈತರು ಹೇಡಿಗಳಲ್ಲ ನೀವು ಹೇಡಿಗಳು. ಬಿಜೆಪಿ ನಾಯಕರಿಗೆ ರೈತರ ಮೇಲೆ ಗೌರವವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಆಡಳಿತದಿಂದಾಗಿ ಯಾರೂ ನೆಮ್ಮದಿಯಿಂದಿಲ್ಲ. ಅದಾನಿ, ಅಂಬಾನಿ ದೊಡ್ಡ ಕಾರ್ಪೊರೇಟ್ ಕಂಪನಿ ಮಾಲೀಕರು ನೆಮ್ಮದಿಯಾಗಿದ್ದಾರೆ. ಆದರೆ, ರೈತರು, ಕಾರ್ಮಿಕರು, ಮಹಿಳೆಯರಿಗೆ ದೇಶದಲ್ಲಿ ರಕ್ಷಣೆ ಇಲ್ಲ. ಮಹಿಳೆಯರ ಮೇಲೆ ಅತ್ಯಾಚಾರ ನಿರಂತರವಾಗಿದೆ. ಈ ಎಲ್ಲದರ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕದಿಂದ ಕರಪತ್ರ ಹಂಚುವ ಕೆಲಸ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷದವರು ಪ್ರತಿಭಟಿಸಲು ಅವಕಾಶ ನೀಡುತ್ತಿಲ್ಲ. ಪ್ರತಿಕೃತಿ ದಹನ ಮಾಡಲು ಅವಕಾಶ ನೀಡುತ್ತಿಲ್ಲ. ಹೊರಗಡೆ ಪ್ರತಿಭಟಿಸಿದ್ರೆ ಜೈಲಿಗೆ ಹಾಕೋದಾಗಿ ಪೊಲೀಸರು ಬೆದರಿಕೆ ಹಾಕುತ್ತಾರೆ. ಬಿಜೆಪಿಯವರು ಪೊಲೀಸರ ಮೂಲಕ ನಮ್ಮ ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.