ಮೈಸೂರು:ಆನೆಯೊಂದಿಗೆ ಕಾದಾಡಿ ಗಂಭೀರವಾಗಿ ಗಾಯಗೊಂಡಿದ್ದ ಹುಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಮೈಸೂರು ಮೃಗಾಲಯದ ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯದಲ್ಲಿ(Bandipur Tiger reserved zone) ಅಕ್ಟೋಬರ್ 20ರಂದು ಕಾಡಾನೆಯೊಂದಿಗೆ 7 ವರ್ಷದ ಗಂಡು ಹುಲಿ ಕಾದಾಡಿ ತೀವ್ರವಾಗಿ ಗಾಯಗೊಂಡಿತ್ತು. ಕಾದಾಟದಲ್ಲಿ ಆನೆ, ಹುಲಿಯನ್ನು ದಂತದಿಂದ ತಿವಿದಿದ್ದರಿಂದ ಹುಲಿಯ ಕರುಳು, ಶ್ವಾಸಕೋಶವು ಕಾಣುವಷ್ಟು ಆಳವಾದ ಗಾಯವಾಗಿತ್ತು.
ಕಾಡಿನಲ್ಲಿ ನರಳಾಡುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದು, ಮೈಸೂರು ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ಕರೆತಂದು ಚಿಕಿತ್ಸೆ ನೀಡುತ್ತಿದ್ದರು.
ಹೊಟ್ಟೆ ಭಾಗದಲ್ಲಿ ರಂಧ್ರ ಉಂಟಾಗಿದ್ದರಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಹುಲಿಗೆ ಪಶುವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದ್ದರು. ನಂತರ ಚೇತರಿಸಿಕೊಂಡಂತೆ ಕಂಡುಬಂದ ಹುಲಿ ಆಹಾರವನ್ನು ಸೇವಿಸಲಾರಂಭಿಸಿತ್ತು.
ಆದರೆ, ಮಂಗಳವಾರ ರಾತ್ರಿ ಅದು ಮೃತಪಟ್ಟಿದೆ. ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ ಅಂಗಾಂಗಳಿಗೂ ಹಾನಿಯುಂಟಾಗಿ ಹುಲಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಹುಲಿಯ ಅಂತ್ಯಕ್ರಿಯೆ ನಡೆಸಲಾಯಿತು.