ಮೈಸೂರು:ಬೃಹತ್ ಸ್ಯಾಂಡಲ್ವುಡ್ ಸ್ಮಗ್ಲಿಂಗ್ ಜಾಲ ಬೇಧಿಸಿರುವ ಸಿಸಿಬಿ ಪೊಲೀಸರು 1 ಕೋಟಿ ರೂ. ಮೌಲ್ಯದ 700 ಕೆಜಿ ಶ್ರೀಗಂಧ, 15 ಸಾವಿರ ಹಣ, 1 ಗೂಡ್ಸ್ ಕ್ಯಾರಿಯರ್ ವಾಹನ, ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡು ಇಬ್ಬರ ಬಂಧನ ಮಾಡಿದ್ದಾರೆ.
ಡಿಸೆಂಬರ್ 13ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಮಂಡಿ ಮೊಹಲ್ಲಾದ ಪುಲಕೇಶಿ ರಸ್ತೆ & ಎಂಕೆಡಿಕೆ ರಸ್ತೆಯ 2ನೇ ಕ್ರಾಸ್ ಸೇರುವ ಸ್ಥಳದಲ್ಲಿ ಟಾಟಾ ಗೂಡ್ಸ್ ಕ್ಯಾರಿಯರ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧದ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿರಿ:ಉತ್ತರದಲ್ಲೂ ದಳಪತಿಗಳಿಗೆ ಆಘಾತ; ಡಿಕೆಶಿ, ಸಿದ್ದರಾಮಯ್ಯ ನೇತೃತ್ವದಲ್ಲಿ 'ಕೈ' ಸೇರಿದ ಕೋನರೆಡ್ಡಿ
ಮೈಸೂರಿನ ಸ್ಮಗ್ಲರ್ ಒಬ್ಬರಿಂದ ಶ್ರೀಗಂಧದ ಮರದ ತುಂಡು ಖರೀದಿಸಿಕೊಂಡು ಬೆಂಗಳೂರಿನ ಕಡೆಗೆ ಸಾಗಾಣಿಕೆ ಮಾಡಲು ತೆರಳುತ್ತಿದ್ದಾಗ ಗುಪ್ತ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ದಾಳಿ ನಡೆಸಿ, ದಂಧೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿಯಲ್ಲಿ ತನಿಖೆ ಮುಂದುವರೆದಿದೆ. ಸ್ಮಗ್ಲಿಂಗ್ ದಂಧೆಯಲ್ಲಿ ಭಾಗಿಯಾಗಿರುವ ಇತರೇ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.
ಈ ದಾಳಿಯನ್ನ ಡಿಸಿಪಿ ಗೀತಪ್ರಸನ್ನ ಮಾರ್ಗದರ್ಶನದಲ್ಲಿ ಸಿಸಿಬಿಯ ಎಸಿಪಿ ಸಿ.ಕೆ.ಅಶ್ವಥನಾರಾಯಣ ನೇತೃತ್ವದಲ್ಲಿ ಸಿಸಿಬಿಯ ಇನ್ಸ್‌ಪೆಕ್ಟರ್ ಎ.ಮಲ್ಲೇಶ್, ಎಎಸ್‌ಐ. ಆರ್.ರಾಜು, ಸಿಬ್ಬಂದಿಗಳಾದ ಜೋಸೆಫ್ ನೊರೋನ್ಹ, ರಾಧೇಶ್, ಉಮಾಮಹೇಶ್, ಪುರುಷೋತ್ತಮ, ಅನಿಲ್, ರಘು, ಸುನಿಲ್, ಅರುಣ್‌ಕುಮಾರ್, ಶ್ರೀನಿವಾಸ, ಮಮತ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.