ಮೈಸೂರು: ಮೀಸಲಾತಿ ಮೂಲಭೂತ ಹಕ್ಕಲ್ಲ, ಸಂಬಂಧಿಸಿದ ರಾಜ್ಯಗಳಿಗೆ ಬಿಟ್ಟ ವಿಚಾರ. ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರಧಾನಿ ಮೋದಿ ಅವರು ಸರ್ವಪಕ್ಷ ನಿಯೋಗ ಸಭೆ ಕರೆದು ಚರ್ಚಿಸಲಿ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಒತ್ತಾಯಿಸಿದರು.
ಮಾಜಿ ಸಂಸದ ಆರ್.ಧ್ರುವನಾರಾಯಣ ಮೈಸೂರು ಸುದ್ದಿಗೋಷ್ಠಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದರ ಬಗ್ಗೆ ಕೇಂದ್ರ ಸರ್ಕಾರ ರಿ-ಪಿಟಿಷನ್ ಹಾಕಬೇಕು ಎಂದು ಹೇಳಿದರು. ಸುಪ್ರೀಂಕೋರ್ಟ್ನಲ್ಲಿ ಸರ್ಕಾರಿ ವಕೀಲರು ಸರಿಯಾಗಿ ವಾದ ಮಾಡದ ಹಿನ್ನೆಲೆಯಲ್ಲಿ ತೀರ್ಪು ಆ ರೀತಿ ಬಂದಿದೆ. 9 ಸದಸ್ಯರನ್ನೊಳಗೊಂಡ ಪೀಠದಲ್ಲಿ ರಿಪಿಟಿಷನ್ ಹಾಕಿ ಮನವರಿಕೆ ಮಾಡಿಕೊಡಬೇಕು.ಇಲ್ಲವಾದರೆ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲಿದೆ ಎಂದರು.
ಕೇಂದ್ರ ಸರ್ಕಾರ ಮೀಸಲಾತಿ ತೆಗೆದು ಹಾಕಲು ಹುನ್ನಾರ ನಡೆಸುತ್ತಿದೆ. ಇದರ ವಿರುದ್ಧ ಫೆ.15 ರಂದು ಪ್ರತಿಭಟನೆ ನಡೆಸಲಾಗುವುದು. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಹಾಗೂ ಸೋಲಿನ ಬಗ್ಗೆ ಪರಾಮರ್ಶೆ ಮಾಡುತ್ತೀವಿ ಎಂದರು.
ನಂತರ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಕುತ್ತು ಬರಲಿದೆ. ಕೇಂದ್ರ ಸರ್ಕಾರ ಆರ್‌ಎಸ್‌ಎಸ್ ಗೌಪ್ಯ ಅಜೆಂಡಾ ಜಾರಿ ಮಾಡಲು ಮುಂದಾಗುತ್ತಿದೆ ಎಂದು ಕಿಡಿಕಾರಿದರು.
ನಂತರ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಮಂಜುಳ ಮಾನಸ ಮಾತನಾಡಿ, ಕೇಂದ್ರ ಸರ್ಕಾರ ಎಸ್‌ಟಿ, ಎಸ್‌ಸಿ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ತೆಗೆದು ಹಾಕಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.