ಮೈಸೂರು:ಕಬಿನಿ ಜಲಾಶಯದಿಂದ ಹೊರಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಕಪಿಲಾ ನದಿ ಪ್ರದೇಶದಲ್ಲಿ ಪ್ರವಾಹ ಇಳಿಮುಖವಾಗಿದೆ. ಸಹಜ ಸ್ಥಿತಿಯತ್ತ ಜನಜೀವನ ಮರಳುತ್ತಿದ್ದು, ಪ್ರವಾಹದಿಂದ ಅಪಾರ ನಷ್ಟವಾಗಿದೆ.
ನಾಲ್ಕು ದಿನಗಳಿಂದ ಕಬಿನಿ ಜಲಾಶಯ, ನುಗು ಹಾಗೂ ತಾರಕ ಜಲಾಶಯದಿಂದ ಸುಮಾರು 68,000 ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಬಿಡಲಾಗಿದೆ. ಇದರಿಂದ ಹಚ್.ಡಿ.ಕೋಟೆ, ಸರಗೂರು, ನಂಜನಗೂಡು ತಾಲೂಕಿನ ತಗ್ಗು ಪ್ರದೇಶಗಳಿಗೆ ನದಿ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ.
ಹಾಗೆಯೇ ಬಡಾವಣೆಗಳಿಗೂ ನೀರು ನುಗ್ಗಿ ಜನಜೀವನ ಅತಂತ್ರವಾಗಿದ್ದು, ಹಲವಾರು ಮನೆಗಳು ಕುಸಿದು ಬಿದ್ದಿವೆ. ಆದರೆ ಭಾನುವಾರ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಇಂದು ಕಬಿನಿ ಜಲಾಶಯದಿಂದ 16,600 ಕ್ಯೂಸೆಕ್ ನೀರನ್ನು ಮಾತ್ರ ಹೊರ ಬಿಡಲಾಗಿದೆ. ಇದರಿಂದ ಜನರಿಗೆ ಪ್ರವಾಹದ ಭೀತಿ ಇಲ್ಲದಂತಾಗಿದೆ.
ಈ ನಡುವೆ ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಹೊಮ್ಮರಗನಹಳ್ಳಿ/ಹರದನಹಳ್ಳಿ ಹಾಗೂ ಮಾದಾಪುರ, ಬೆಳ್ಳುರು ಸೇತುವೆಯ ಮೇಲೆ ಹರಿಯುತ್ತಿದ್ದ ನೀರು ಕಡಿಮೆಯಾಗಿದೆ. ಈಗ ಪ್ರವಾಹ ಇಳಿಮುಖವಾಗಿದ್ದರಿಂದ ನಂಜನಗೂಡಿನ ದೇವಾಲಯಗಳು ಜಲಬಂಧನದಿಂದ ಮುಕ್ತಿ ಹೊಂದಿವೆ. ಜಿಲ್ಲೆಯಲ್ಲಿ ಹಲವು ಕಡೆ ಜಿಟಿಜಿಟಿ ಮಳೆ ಮುಂದುವರೆದಿದೆ.