ಮೈಸೂರು: ಹೆಚ್. ಡಿ. ದೇವೇಗೌಡರ ಬಗ್ಗೆ ಗೌರವ ಇದೆ. ಕಾಂಗ್ರೆಸ್ ಪಕ್ಷ ಎಂದಿಗೂ ಅವರನ್ನು ಬೆಂಬಲಿಸಿದೆ. ಅವರನ್ನು ಶಕ್ತಿಹೀನ ಮಾಡಲು ಹೊರಟಿಲ್ಲ. ಆದರೆ, ಅವರು ಅವಕಾಶವಾದಿ ರಾಜಕಾರಣ ಮಾಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಗಂಭೀರವಾಗಿ ಆರೋಪಿಸಿದರು.
ಇಂದು ಪುರಭವನದ ಮುಂಭಾಗದಲ್ಲಿರುವ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ದೇವೇಗೌಡರು ಅವಕಾಶವಾದಿ ರಾಜಕಾರಣ ಮಾಡುತ್ತಾರೆ. ಇದಾಗಬಾರದು. ದೇವೇಗೌಡರು ವಿಸ್ತಾರವಾಗಿ ಬೆಳೆಯಬಹುದಿತ್ತು. ಆದರೆ, ಕುಟುಂಬಕ್ಕೆ ಸೀಮಿತವಾಗಿದ್ದಾರೆ. ಮಕ್ಕಳು, ಮೊಮ್ಮಕ್ಕಳನ್ನು ತೆಗೆದುಕೊಂಡು ಬಂದು ಇಡೀ ಪಕ್ಷ ಕುಟುಂಬದ ಪಕ್ಷವನ್ನಾಗಿಸಿದ್ದಾರೆ. ಹಾಗಾಗಿಯೇ ಜೆಡಿಎಸ್ನ ಮುಖಂಡರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಕುಟುಂಬ ರಾಜಕೀಯ ಕಾನೂನು: ಒಂದು ಕುಟುಂಬದ ಇಷ್ಟು ಮಂದಿ ಮಾತ್ರ ರಾಜಕಾರಣದಲ್ಲಿರಬೇಕೆಂದು ಕಾನೂನು ಮಾಡಲಿ ಎಂಬ ಹೆಚ್ ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾನೂನು ಮಾಡಲಿ ಎಂದು ನಾನು ಹೇಳುವುದಿಲ್ಲ. ಜೆಡಿಎಸ್ ಕುಟುಂಬದ ಬೆಳವಣಿಗೆ ಬದಲು ಎಲ್ಲರಿಗೂ ಅವಕಾಶ ಕೊಡಬಹುದಿತ್ತು. ನಮ್ಮ ಪಕ್ಷದಲ್ಲಿ ಸಾಮಾಜಿಕ ನ್ಯಾಯ ನೀಡಿದ್ದೇವೆ. ಹಾಸನದಲ್ಲಿ ಮುಸ್ಲಿಂ ಗೆಲ್ಲಲು ಅವಕಾಶ ಇದ್ದಾಗ ಜೆಡಿಎಸ್ ನಿಂದ ಯಾಕೆ ಅವಕಾಶ ಕೊಡಬಾರದು. ಹಾನಗಲ್ ಸಿಂಧಗಿಯಲ್ಲಿ ಮುಸ್ಲಿಂ ಮತ ಡಿವೈಡ್ ಆಗಲಿ. ಕಾಂಗ್ರೆಸ್ಗೆ ಸೋಲಾಗಲಿ ಎಂದು ಅವಕಾಶ ನೀಡಿದರು. ಗೆಲ್ಲುವ ಕಡೆ ಅವಕಾಶ ಕೊಡಲ್ಲ. ಇದನ್ನೇ ಅವಕಾಶವಾದಿ ರಾಜಕಾರಣ ಎಂದು ಹೇಳಿದರು.
ಎನ್. ಮಹೇಶ್ ಸಿದ್ದಾಂತ ಬಿಟ್ಟು ಬಿಜೆಪಿಗೆ ಸೇರ್ಪಡೆ :ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರನ್ನು ಅವಕಾಶವಾದಿ ಎಂದು ಹೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನೂರಕ್ಕೆ ನೂರರಷ್ಟು ಹೌದು. ಬಿಎಸ್ಪಿಯಿಂದ ಉಚ್ಛಾಟನೆ ಮಾಡಿದ್ದಾರೆ. ಕಾಂಗ್ರೆಸ್ನಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಅವರು ನೀ ಎಲ್ಲಿದ್ದಿಯೋ ಅಲ್ಲೇ ಇರು ಅಂದ್ರು, ಅದಕ್ಕೆ ಅನಿವಾರ್ಯವಾಗಿ ಬಿಜೆಪಿ ಸೇರಿದೆ ಎಂದು ಮಹೇಶ್ ಅವರೇ ಹೇಳಿದ್ದಾರೆ. ಸಿದ್ದಾಂತವನ್ನು ಬಿಟ್ಟು ಬಿಜೆಪಿಗೆ ಸೇರಿದ್ರು ಎಂದು ಟೀಕಿಸಿದರು.
ಕಳೆದ ಬಾರಿಯಂತೆ ಈ ಬಾರಿಯು 14 ಕ್ಷೇತ್ರದಲ್ಲಿ ಗೆಲುವು :ಇತರ ಪಕ್ಷಗಳಿಗಿಂತ ಅತ್ಯಂತ ಹೆಚ್ಚಿನ ಮತದ ಅಂತರದಲ್ಲಿ ಗೆಲ್ಲಬೇಕೆಂಬ ಗುರಿಯನ್ನು ಇಟ್ಟುಕೊಂಡಿದ್ದೇವೆ. ಮೈಸೂರು- ಚಾಮರಾಜನಗರ ಕ್ಷೇತ್ರದಲ್ಲಿ ಗೆಲ್ಲುತ್ತೇವೆ. ಎರಡು ಜಿಲ್ಲೆಯ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಜೆಡಿಎಸ್ಗೆ ನೆಲೆಯಿಲ್ಲ. ಅಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಇದೆ. ಮೈಸೂರು ಜಿಲ್ಲೆಯಲ್ಲಿ ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ನೆಲೆಯಿಲ್ಲ.