ಮೈಸೂರು: ಜಂಬೂಸವಾರಿಯ ದಿನ 21 ಕುಶಾಲತೋಪುಗಳನ್ನು ಸಿಡಿಸುವ ಫಿರಂಗಿಗಳಿಗೆ ಇಂದು ಪೂಜೆ ಸಲ್ಲಿಸುವ ಮೂಲಕ ತಾಲೀಮಿಗೆ ಚಾಲನೆ ನೀಡಲಾಯಿತು.
ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಮೊದಲ ಹಂತದ 9 ಗಜಪಡೆಗಳು ಅರಮನೆ ಸೇರಿದ್ದು ಭಾರ ಹೊರುವ ತಾಲೀಮು ನಡೆಯುತ್ತಿವೆ. ಇದರ ಮಧ್ಯೆ ಆನೆಗಳು, ಕುದುರೆಗಳ ಸಮ್ಮುಖದಲ್ಲಿ ನಡೆಯುವ ಫಿರಂಗಿ ತಾಲೀಮಿಗೆ ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಹಾಗೂ ಜಿಲ್ಲಾಧಿಕಾರಿ ಬಗಾದಿ ಗೌತಮ್, ಅರಮನೆಯ ಮುಂಭಾಗದ ಆನೆ ಬಾಗಿಲಿನಲ್ಲಿ ಇರುವ 11 ಫಿರಂಗಿಗಳಿಗೆ ಪೂಜೆ ಸಲ್ಲಿಸಿ ಕುಂಬಳ ಕಾಯಿಯನ್ನು ಒಡೆಯುವ ಮೂಲಕ 21 ಕುಶಾಲತೋಪುಗಳ ಫಿರಂಗಿಗಳ ತಾಲೀಮಿಗೆ ಚಾಲನೆ ನೀಡಲಾಯಿತು.
ಮುಂದಿನ ತಿಂಗಳು ಸೆಪ್ಟೆಂಬರ್ನಲ್ಲಿ ಕೋಟೆ ಮಾರಮ್ಮನ ದೇವಾಲಯದ ಆವರಣದಲ್ಲಿ ಗಜಪಡೆ ಹಾಗೂ ಅಶ್ವಪಡೆ ಎದುರು ಫಿರಂಗಿಗಳ ಮೂಲಕ ಕುಶಲ ತೋಪುಗಳನ್ನು ಸಿಡಿಸುವ ತಾಲೀಮು ನಡೆಯಲಿದೆ.
ಕುಶಾಲತೋಪುಗಳನ್ನು ಸಿಡಿಸುವ ಫಿರಂಗಿಗಳಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಪ್ರತಿ ವರ್ಷದಂತೆ ಈ ವರ್ಷವೂ ಜಂಬೂಸವಾರಿಯ ದಿನ ಆನೆಗಳು ಕುದುರೆಗಳು ಶಬ್ದಕ್ಕೆ ಹೆದರದಂತೆ ತರಬೇತಿ ನೀಡುವ ಕುಶಾಲತೋಪುಗಳ ತಾಲೀಮಿಗೆ ಇಂದು ಪೂಜೆ ಸಲ್ಲಿಸುವ ಮೂಲಕ ಪ್ರಾರಂಭ ಮಾಡಲಾಯಿತು. ಇನ್ನು, ದಸರಾಗೆ ಸಿದ್ಧತೆಗಳು ನಡೆಯುತ್ತಿದ್ದು, ಮಳೆ ನಿಂತ ನಂತರ ರಸ್ತೆ ರಿಪೇರಿ ಸೇರಿದಂತೆ ಪ್ರಮುಖ ಕೆಲಸಗಳನ್ನು ಪ್ರಾರಂಭಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಳೆಯಿಂದ ಆದ ನಷ್ಟ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳು ಹಾಗೂ ಶಾಸಕರ ಸಭೆ ನಡೆಸಲಾಗುವುದು. ಮೈಸೂರು ಜಿಲ್ಲೆಯ 343 ಮನೆಗಳು ಮಳೆಯಿಂದ ಭಾಗಶಃ ಹಾನಿಯಾಗಿದ್ದು, ಅವುಗಳಿಗೆ ಪರಿಹಾರ ನೀಡಲಾಗುವುದು ಎಂದರು.
ಪಂಜಿನ ಕವಾಯತಿನಲ್ಲೂ ಫಿರಂಗಿ ಬಳಕೆ..ಫಿರಂಗಿಗಳು ಸೇರಿದಂತೆ ಕುಶಾಲತೋಪುಗಳನ್ನು ಸ್ವಚ್ಛತೆ ಮಾಡಿ ಪೂಜೆ ಸಲ್ಲಿಸಲಾಯಿತು. ಜಂಬೂಸವಾರಿಯ ದಿನ ರಾಷ್ಟ್ರಗೀತೆ ಹಾಗೂ ನಾಡದೇವತೆಗೆ ಗೌರವ ನೀಡುವ ಸಲುವಾಗಿ ಕುಶಾಲತೋಪುಗಳನ್ನು ಸಿಡಿಸಲಾಗುವುದು. ಅದರ ಪ್ರಾಯೋಗಿಕ ತಾಲೀಮು ಸೆಪ್ಟೆಂಬರ್ ನಲ್ಲಿ ನಡೆಯಲಿದ್ದು, ಅದರ ಭಾಗವಾಗಿ ಇಂದು ಕುಶಾಲ ತೋಪುಗಳು ಹಾಗೂ ಫಿರಂಗಿಯನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಗಿದೆ. ಈ ಬಾರಿಯ ಜಂಬೂಸವಾರಿಯ ಜೊತೆಗೆ ಪಂಜಿನ ಕವಾಯತಿನ ಮೈದಾನದಲ್ಲಿ ಫಿರಂಗಿ ತೋಪುಗಳನ್ನು ಬಳಸಲಾಗುವುದು ಎಂದು ಪೂಜೆ ಸಲ್ಲಿಸಿದ ನಂತರ ನಗರ ಪೊಲೀಸ್ ಕಮಿಷನರ್ ಡಾ. ಚಂದ್ರಗುಪ್ತ ಮಾಹಿತಿ ನೀಡಿದರು.
ಇದನ್ನೂ ಓದಿ:ಮೈಸೂರು ದಸರಾ.. ಗಜಪಡೆ ತಾಲೀಮು, ಆಹಾರ ಕ್ರಮ ಹೇಗಿದೆ ಗೊತ್ತಾ?