ಮೈಸೂರು: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಮಾರ್ಗಸೂಚಿಯಂತೆ ಅಂತಿಮ ವರ್ಷದ ಪದವಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲು ಮೈಸೂರು ವಿಶ್ವವಿದ್ಯಾನಿಲಯ ಸಿದ್ಧತೆ ಮಾಡಿಕೊಂಡಿದೆ.
ಇನ್ನೆರಡು ದಿನದಲ್ಲಿ ಅಂತಿಮ ವರ್ಷದ ಪದವಿ ಪರೀಕ್ಷೆ ವೇಳಾಪಟ್ಟಿ ಪ್ರಕಟ ಯುಜಿಸಿ ಮಾರ್ಗಸೂಚಿಯಂತೆ ಅಂತಿಮ ವರ್ಷದ ಪದವಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವೇಳಾಪಟ್ಟಿ ಪ್ರಕಟಿಸಿ ಇನ್ನೆರಡು ದಿನಗಳಲ್ಲಿ ಸುತ್ತೋಲೆ ಹೊರಡಿಸಲು ನಿರ್ಧಾರ ಮಾಡಿಕೊಂಡಿದೆ. ಮೈಸೂರು ವಿವಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಗಸ್ಟ್ ಕೊನೆ ವಾರ ಆನ್ಲೈನ್ ಕ್ಲಾಸ್ ಹಾಗೂ ಸೆಪ್ಟೆಂಬರ್ ಮೊದಲ ವಾರದಲ್ಲಿ ಆಫ್ ಲೈನ್ ಕ್ಲಾಸ್ ನಡೆಸಿ ವಿದ್ಯಾರ್ಥಿಗಳ ಗೊಂದಲ, ಅನುಮಾನಗಳಿಗೆ ಉತ್ತರ ನೀಡಬೇಕೆಂದು ಬೋಧಕರಿಗೆ ತಿಳಿಸಲಾಗಿದೆ.
ಜೊತೆಗೆ ಅಂತರ್ ರಾಜ್ಯದ ವಿದ್ಯಾರ್ಥಿಗಳು ಬರಲು ಸಾಧ್ಯವಾಗಲ್ಲ ಎಂದಾದರೆ ಅವರಿಗೆ ಮತ್ತೊಂದು ದಿನ ಪರೀಕ್ಷೆ ನಡೆಸಲಾಗುವುದು. ಯಾವುದೇ ತೊಂದರೆಯಾಗದಂತೆ ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ಆಯೋಜಿಸುವುದರಿಂದ ಪೋಷಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಮಹಾರಾಣಿ ಕಾಲೇಜಿನಲ್ಲಿ 3,000 ವಿದ್ಯಾರ್ಥಿಗಳಿರುವುದರಿಂದ ಅಲ್ಲಿ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ. ಅಂದರೆ 1,200 ವಿದ್ಯಾರ್ಥಿಗಳಷ್ಟೇ ಹಾಜರಾಗಿ ಉಳಿದವರಿಗೆ ಬೇರೆ ಕೊಠಡಿ ವ್ಯವಸ್ಥೆ ಮಾಡಲಾಗುವುದು. ಪಿಜಿ ಪ್ರವೇಶಕ್ಕೆ ಸಾಮಾನ್ಯ ಪರೀಕ್ಷೆ ನಡೆಸಲು ಪ್ರತ್ಯೇಕ ದಿನಾಂಕ ನಿಗದಿಪಡಿಸಲಾಗುದು.
ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ರಮಗಳನ್ನು ಕೈಗೊಂಡು ವಿಶ್ವವಿದ್ಯಾನಿಲಯ ವ್ಯಾಪ್ತಿಯ 4 ಜಿಲ್ಲೆಗಳ ಪ್ರಾಂಶುಪಾಲರಿಗೆ ಮಾರ್ಗದರ್ಶನ ಕೊಡಲು ಸಭೆ ಕರೆಯಲಾಗುತ್ತದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಪರೀಕ್ಷೆ ನಡೆಸುವುದಾಗಿ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ತಿಳಿಸಿದ್ದಾರೆ.