ಮೈಸೂರು: ನಂಜನಗೂಡಿನ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಾಲಯ ತೆರವು ಪ್ರಕರಣ ಸರ್ಕಾರದ ಗಮನಕ್ಕೆ ಬಾರದೇ ಆಗಿದೆ. ಈ ಕುರಿತಂತೆ ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೇ, ಅಧಿವೇಶನದಲ್ಲಿಯೂ ಚರ್ಚೆ ಆಗಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಧಾರ್ಮಿಕ ದೇವಾಲಯಗಳ ರಕ್ಷಣೆ ಕಾಯ್ದೆಯಲ್ಲಿ ಎಲ್ಲ ಧರ್ಮದ ದೇವಾಲಯಗಳನ್ನು ರಕ್ಷಣೆ ಮಾಡಲಾಗುವುದು ಎಂದು ಹೇಳಿದರು.