ಮೈಸೂರು: ಶರನ್ನವರಾತ್ರಿಯ ಮೊದಲ ದಿನ ಅರಮನೆಯಲ್ಲಿ ರಾಜ ವಂಶಸ್ಥರಿಂದ ಪೂಜಾ ಕೈಂಕರ್ಯಗಳು ಆರಂಭವಾಗಿ, ದರ್ಬಾರ್ ಹಾಲ್ನಲ್ಲಿರುವ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿ ಯದುವೀರ್ ಖಾಸಗಿ ದರ್ಬಾರ್ ನಡೆಸಿದರು. ಜೊತೆಗೆ ಅರಮನೆಯ ಪಟ್ಟದ ಆನೆ, ಕುದುರೆ, ಹಸು, ಒಂಟೆಗಳಿಗೆ ಪೂಜೆ ಸಲ್ಲಿಸಲಾಯಿತು.
ರಾಜ ವಂಶಸ್ಥರಿಂದ ಖಾಸಗಿ ದರ್ಬಾರ್ ನವರಾತ್ರಿಯ ಮೊದಲ ದಿನವಾದ ಇಂದು ಮುಂಜಾನೆ 4.30 ರಿಂದಲೇ ಅರಮನೆಯಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು. ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆಶಾಸ್ತ್ರ ಮಾಡಿಸಲಾಯಿತು. ನಂತರ ಬೆಳಗ್ಗೆ 6 ರಿಂದ 6.11 ರವರೆಗಿನ ಕನ್ಯಾ ಲಗ್ನದಲ್ಲಿ ದರ್ಬಾರ್ ಹಾಲ್ನಲ್ಲಿ ಜೋಡಿಸಲಾಗಿರುವ ಸಿಂಹಾಸನಕ್ಕೆ ವಜ್ರಖಚಿತ ಸಿಂಹದ ತಲೆ ಜೋಡಿಸಲಾಯಿತು. ಬಳಿಕ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಬೆ. 7.45 ರಿಂದ 8.55 ರ ತುಲಾ ಲಗ್ನದಲ್ಲಿ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಅವರು ಕಂಕಣಧಾರಣೆ ಮಾಡಿದರೆ, ವಾಣಿವಿಲಾಸ ದೇವರ ಮನೆಯಲ್ಲಿ ರಾಜಕುಮಾರಿ ತ್ರಿಶಿಕ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ಮಾಡಿದರು.
ಸಾಂಪ್ರದಾಯಿಕ ಪೂಜೆ:
ಅರಮನೆಯ ಪಟ್ಟದ ಹಸು, ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆಯನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ಕರೆದುಕೊಂಡು ಹೋಗಿ ಪುನಃ ಜಯಮಾರ್ತಾಂಡ ದ್ವಾರದ ಮೂಲಕ, ಮಂಗಳವಾದ್ಯಗಳೊಂದಿಗೆ ಅರಮನೆಯ ಕಲ್ಯಾಣ ತೊಟ್ಟಿಗೆ ಕರೆದುಕೊಂಡು ಬಂದು ಪೂಜೆ ಸಲ್ಲಿಸಲಾಯಿತು.
ಆ ನಂತರ ಬೆಳಗ್ಗೆ 11.45 ರಿಂದ ಮ. 12.15 ರ ನಡುವಿನ ಧನುರ್ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೋಹಣ ಮಾಡಿ ಖಾಸಗಿ ದರ್ಬಾರ್ನಲ್ಲಿ ಪಾಲ್ಗೊಂಡರು. ನಂತರ ಅರಮನೆಯ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಹೋಗಿ ಬಿಜಯ ಆಚರಣೆಯಲ್ಲಿ ಪಾಲ್ಗೊಂಡರು. ಇಂದಿನಿಂದ ಅಕ್ಟೋಬರ್ 14ರವರೆಗೆ ಖಾಸಗಿ ದರ್ಬಾರ್ ಜರುಗಲಿದೆ.
ಸಿಂಹಾಸನದ ವಿಶೇಷತೆ:
ಸಿಂಹಾಸನದ ಮುಖ್ಯಪೀಠವು 2.25 ಮೀಟರ್ ಎತ್ತರವಿದೆ. ಸಿಂಹಾಸನವು ಚಿನ್ನದ ಬಾಳೆ ಕಂಬ ಹಾಗೂ ಸ್ವರ್ಣ ಮಾವಿನ ಎಲೆಗಳಿಂದ ಶೃಂಗರಿಸಲ್ಪಟ್ಟಿದೆ. ಬಂಗಾರದ ಛತ್ರಿಯ ತುದಿಯಲ್ಲಿ ಆಭರಣಗಳಿಂದ ಸಿಂಗರಿಸಲಾದ ಪಕ್ಷಿಯನ್ನು ಕೂರಿಸಲಾಗಿದೆ. ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ. ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕಗಳಿವೆ. ಸಿಂಹಾಸನವನ್ನು ಹತ್ತುವ ಪಾವಟಿಕೆಗಳ ಎರಡು ಕಡೆಗಳಲ್ಲೂ ಸ್ತ್ರೀ ಪುತ್ಥಳಿಗಳನ್ನು ನಿರ್ಮಿಸಲಾಗಿದೆ.
ಇದನ್ನೂ ಓದಿ:ಜಟ್ಟಿ ಕಾಳಗ ರದ್ದು: ಅರಮನೆ 'ಖಾಸಗಿ ದರ್ಬಾರ್' ಕಾರ್ಯಕ್ರಮ ಪಟ್ಟಿ ಹೀಗಿದೆ..
ಸಿಂಹಾಸನಕ್ಕೆ ಕೂರ್ಮ ರೂಪದ ಆಸನವನ್ನು ಒದಗಿಸಲಾಗಿದ್ದು, ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸಿಂಹಾಸನದ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ. ಮೂರು ಕೋನಗಳಲ್ಲೂ ಎರಡು ವ್ಯಾಘ್ರಗಳು. ಎರಡು ಅಶ್ವಗಳು ಮತ್ತು ನಾಲ್ಕು ಹಂಸ ಪಕ್ಷಿಗಳ ಚಿತ್ರವಿದೆ. ಮುಖ್ಯ ಆಸನದ ಹಿಂಭಾಗ ಚಾಮುಂಡೇಶ್ವರಿ, ಲಕ್ಷ್ಮಿ ಮತ್ತು ಸರಸ್ವತಿ ದೇವತೆಗಳೊಂದಿಗೆ ಅಷ್ಟದಿಕ್ಪಾಲಕರ ಚಿತ್ರವಿದೆ. ರಾಜನ ಕರ್ತವ್ಯದ ಧ್ಯೇಯವಾಕ್ಯವನ್ನು ಇಲ್ಲಿ ಕಾಣಬಹುದು.