ಮೈಸೂರು: ಈ ಬಾರಿ ನಾಡಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳು ಆರಂಭವಾಗಿದ್ದು, ಆಗಸ್ಟ್ ಮೊದಲ ವಾರದಲ್ಲಿ ಗಜಪಯಣ ನಡೆಯಲಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆಯಾಗಿದ್ದ ದಸರಾವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ. ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕೂಡ ಪ್ರವಾಸೋದ್ಯಮದ ಉತ್ತೇಜನಕ್ಕೆ ಅದ್ದೂರಿ ದಸರಾ ನಡೆಸಲು ಉತ್ಸುಕರಾಗಿದ್ದಾರೆ.
ಜುಲೈ 15ರಿಂದ ಆನೆಗಳ ಆಯ್ಕೆ:ದಸರಾಗೆ 60 ದಿನ ಮುಂಚೆಯೇ ಗಜ ಪಯಣದ ಮೂಲಕ 15 ಆನೆಗಳನ್ನು ಕರೆತರಲು ಸಿದ್ಧತೆ ನಡೆಯುತ್ತಿದೆ. ಗಜಪಯಣದ ಮೂಲಕ ಅರಮನೆಗೆ ಆಗಮಿಸುವ ಆನೆಗಳಿಗೆ ಆಹಾರ ಪೂರೈಸುವ ಟೆಂಡರ್ ಅನ್ನು ಇಂದು(ಜುಲೈ 01) ಕರೆಯಲಿದ್ದು, ಜುಲೈ 15 ರಿಂದ ವೈದ್ಯರು, ಅರಣ್ಯಾಧಿಕಾರಿಗಳು ಹಾಗೂ ತಜ್ಞರ ತಂಡ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿರುವ ಆನೆ ಶಿಬಿರಗಳಿಗೆ ಭೇಟಿ ನೀಡಿ 15 ಆನೆಗಳನ್ನು ಆಯ್ಕೆ ಮಾಡಲಿದೆ.