ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಕಾರ್ಯಕ್ರಮವನ್ನು ಅರಮನೆ ಮೈದಾನ ಅಥವಾ ರೇಸ್ ಕೋರ್ಸ್ ಆವರಣದಲ್ಲಿ ಆಯೋಜಿಸಲು ಚಿಂತನೆ ನಡೆಯುತ್ತಿದೆ. ಅರಮನೆ ಮೈದಾನಕ್ಕಿಂತ ರೇಸ್ ಕೋರ್ಸ್ ಆವರಣದಲ್ಲಿ ಹೆಚ್ಚು ಜನ ಸೇರಲು ಸ್ಥಳಾವಕಾಶ ಇರುವುದರಿಂದ ಅದುವೇ ಸೂಕ್ತ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಅರಮನೆ ಆವರಣದಲ್ಲಿ ಕೇವಲ 15000 ಜನ ರಸ್ತೆ ಸೇರಬಹುದು. ಆದರೆ ರೇಸ್ ಕೋರ್ಸ್ ನಲ್ಲಿ 1.5 ಲಕ್ಷ ಜನರು ಸೇರಬಹುದು. ಹಾಗಾಗಿ ಇವೆರೆಡರಲ್ಲಿ ರೇಸ್ಕೋರ್ಸ್ ಸ್ಥಳವೇ ಸೂಕ್ತ ಎನಿಸುತ್ತಿದೆ. ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮೋದಿ ಬರುವ ನೆಪದಲ್ಲಿ ಮೈಸೂರಿನ ರಸ್ತೆಗಳ ಅಭಿವೃದ್ಧಿ:ಪ್ರಧಾನಿ ಮೋದಿ ಮೈಸೂರಿಗೆ ಬರುವ ನೆಪದಲ್ಲಿ ಮೈಸೂರಿನ ರಸ್ತೆಗಳ ಅಭಿವೃದ್ಧಿಗೆ ಕೂಡ ಸರ್ಕಾರದಿಂದ ಹಣವನ್ನು ಬಿಡುಗಡೆ ಮಾಡಿಕೊಳ್ಳಲಾಗುತ್ತದೆ. ಈ ಬಗ್ಗೆ ಉಸ್ತುವಾರಿ ಸಚಿವರು ಕ್ರಮ ವಹಿಸಿದ್ದಾರೆ. ಹೀಗಾಗಿ ಸಿಎಂ ಅವರು ವಿದೇಶ ಪ್ರವಾಸದಿಂದ ಮರಳಿದ ಬಳಿಕ ಮೈಸೂರಿಗೆ ಬಂದು ಸಭೆ ನಡೆಸಲಿದ್ದಾರೆ ಎಂದರು.