ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20 ಮತ್ತು 21ರಂದು ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
- ಜೂ.20 ರಂದು ಬೆಳಗ್ಗೆ 11.45ಕ್ಕೆ ವಿಶೇಷ ವಿಮಾನದ ಮೂಲಕ ಯಲಹಂಕ ವಾಯುನೆಲೆಗೆ ಆಗಮಿಸುವರು. ಬಳಿಕ ಹೆಲಿಕ್ಯಾಪ್ಟರ್ ಮೂಲಕ ಕೊಮ್ಮಘಟ್ಟ ಹೆಲಿಪ್ಯಾಡ್ಗೆ ಬಂದು ಮಧ್ಯಾಹ್ನ 12.30 ರಿಂದ 1.45 ರವರೆಗೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಹಾಗೂ ರೈಲ್ವೆ ರೋಡ್ ಯೋಜನೆ ಮತ್ತು ಬಹು ಮಾದರಿ ಲಾಜಿಸ್ಟ್ರಿಕ್ ಪಾರ್ಕ್ಗೆ ಪ್ರಧಾನಿ ಮೋದಿ ಶಂಕು ಸ್ಥಾಪನೆ ಮಾಡಲಿದ್ದಾರೆ.
- ಮಧ್ಯಾಹ್ನ 2.30 ರಿಂದ 3.30 ರವರೆಗೆ ಬೆಂಗಳೂರಿನ ಜ್ಞಾನ ಭಾರತಿ ಆವರಣದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಹಾಗೂ ಮೇಲ್ದರ್ಜೆಗೇರಿಸಲ್ಪಟ್ಟ 150 ಐಟಿಐಗಳ ಲೋಕಾರ್ಪಣೆ ಮಾಡಿ ನಂತರ 4 ಗಂಟೆಯ ವೇಳೆಗೆ ಮೈಸೂರಿನತ್ತ ತೆರಳಲಿದ್ದಾರೆ.
- ಸಂಜೆ 4 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿನತ್ತ ಪ್ರಯಾಣ ಬೆಳೆಸಿ, 4.50ಕ್ಕೆ ಮೈಸೂರು ತಲುಪಲಿದ್ದಾರೆ. ಸಂಜೆ 5 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಐಐಎಸ್ ಹೆಚ್ ಎಕ್ಸಲೆನ್ಸ್ ಸೆಂಟರ್ ಲೋಕಾರ್ಪಣೆ ಮಾಡಿ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ.
- ಬಳಿಕ ಸಂಜೆ 6.30ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಿ, ನಂತರ ವೇದ ಪಾಠಶಾಲಾ ಕಟ್ಟಡ ಲೋಕಾರ್ಪಣೆ ಮಾಡಲಿದ್ದಾರೆ.
- ರಾತ್ರಿ 7:30 ರ ಸುಮಾರಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು ನಂತರ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.