ಮೈಸೂರು:ಎಂಟನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮೈಸೂರಿನ ಅಂಬಾವಿಲಾಸ ಅರಮನೆಯ ಯೋಗ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಅರಮನೆಯ ಮುಂಭಾಗ ನಡೆಯುತ್ತಿರುವ ಯೋಗ ದಿನದ ವೇದಿಕೆಯಲ್ಲಿ ಪ್ರಧಾನಿ ಜೊತೆ ಮಹಾರಾಜರಾದ ಯಧುವೀರ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು, ಉಸ್ತುವಾರಿ ಸಚಿವರು ಹಾಗೂ ಆಯುಷ್ ಇಲಾಖೆಯ ಸಚಿವರು ಭಾಗವಹಿಸಲಿದ್ದು, ಸುಮಾರು 51 ವಿವಿಧ ವರ್ಗದ ಜನರೂ ಪಾಲ್ಗೊಂಡಿದ್ದಾರೆ.
15 ಸಾವಿರಕ್ಕೂ ಹೆಚ್ಚು ಮಂದಿಗೆ ಅವಕಾಶ:ಈಗಾಗಲೇ ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡಿರುವ ಜನರು ಪ್ರಧಾನಿಯೊಂದಿಗೆ ಯೋಗ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅರಮನೆ ಮುಂಭಾಗ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಅರಮನೆಯ ನಾಲ್ಕು ದ್ವಾರಗಳಲ್ಲಿ ಪ್ರವೇಶ ಕಲ್ಪಿಸಲಾಗಿದೆ. ಬೆಳಗ್ಗೆ 6:30 ರ ಒಳಗೆ ಅರಮನೆಯೊಳಗೆ ಯೋಗ ಮಾಡುವವರು ಬರಬೇಕು, ಅನಂತರ ನಾಲ್ಕು ಪ್ರವೇಶ ದ್ವಾರಗಳನ್ನು ಮುಚ್ಚಲಾಗುವುದು. 15,000ಕ್ಕೂ ಹೆಚ್ಚು ಮಂದಿ ಯೋಗ ಮಾಡಲು ವೇದಿಕೆ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾಹಿತಿ ನೀಡಿದ್ದರು.